ಪೇಜಾವರ ಶೀಗಳ ನಿಧನಕ್ಕೆ ಮೂಡಿಗೆರೆಯಾಧ್ಯಂತ ಸಂತಾಪ…

280
firstsuddi

ಮೂಡಿಗೆರೆ : ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಿಧನಕ್ಕೆ ಮೂಡಿಗೆರೆಯಾದ್ಯಂತ ಸಂತಾಪ ವ್ಯಕ್ತವಾಗಿದೆ.
ಎಳೆಯ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆಯನ್ನು ಸ್ವೀಕಾರ ಮಾಡಿ ಪೇಜಾವರ ಮಠದ ಮಠಾಧೀಶರಾಗಿ, ಅಷ್ಟ ಮಠಗಳ ಪರಂಪರೆಯಲ್ಲಿ ಅತೀ ಹೆಚ್ಚು ಬಾರಿ ಉಡುಪಿ ಪರ್ಯಾಯದ ನೇತೃತ್ವ ವಹಿಸಿ ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಶ್ರೀಗಳದ್ದು. ಸಾಧನೆಯೊಂದಿಗೆ ಸಮಾಜಸೇವೆಯನ್ನು ಉಸಿರಾಗಿಸಿಕೊಂಡಿದ್ದ ಶ್ರೀಗಳ ನಿಧನ ಜಾತ್ಯಾತೀತವಾಗಿ ಆಘಾತವನ್ನು ಉಂಟುಮಾಡಿದೆ. ಇದೀಗ ಶ್ರೀಗಳ ನಿಧನದಿಂದಾಗಿ ಮಲೆನಾಡಿನ ಜನರು ದುಖಿ:ತರಾಗಿದ್ದಾರೆ.
ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು, ಶ್ರೀಗಳು ದಲಿತರುಗಳ ಮನೆಗೆ ಪ್ರವೇಶ ಮಾಡುವ ಮೂಲಕ ಅಸ್ಪøಶ್ಯತೆ ವಿರುದ್ಧ ಹೋರಾಟ ಮಾಡುತ್ತಿದ್ದರು. ಒಬ್ಬ ಸ್ವಾಮೀಜಿಯಾಗಿ ಸಮಾಜದಲ್ಲಿನ ತೊಡಕುಗಳನ್ನು ನಿವಾರಿಸುವಲ್ಲಿ ಅವರು ಸದಾ ಯೋಚಿಸುತ್ತಿದ್ದರು. ಎಲ್ಲಾ ಸಮುದಾಯದವರ ಜೊತೆಗೆ ಉತ್ತಮ ಬಾಂಧವ್ಯವನ್ನು ಇರಿಸಿಕೊಂಡಿದ್ದ ಶ್ರೀಗಳ ಅಗಲಿಕೆ ನಂಬಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಸಮುದಾಯದವರಿಗೆ ಗುರುಗಳಂತಿದ್ದ ಶ್ರೀಗಳ ನಿಧನ ಅವರ ಭಕ್ತರಿಗೆ ಅಪಾರ ನೋವು ತಂದಿದೆ ಎಂದರು.
ಕೃಷ್ಣ ನಗರಿ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ನಮ್ಮನ್ನು ಅಗಲಿರುವುದು ದುಖಃದ ಸಂಗತಿ. ಅವರ ನಿಧನದ ಸುದ್ದಿ ನಂಬಲು ಸಾಧ್ಯವಾಗುತ್ತಿಲ್ಲ. ಮಲೆನಾಡಿನ ಜನರ ಬಗ್ಗೆ ಅವರಿಗೆ ಇದ್ದ ವಿಶೇಷ ಪ್ರೀತಿ ಮೂಡಿಗೆರೆಯಲ್ಲಿರುವ ಅವರ ಭಕ್ತಸಾಗರಕ್ಕೆ ದಾರಿದೀಪವಾಗಿತ್ತು. ಅವರ ಮುದ್ದು ಮುಖದ ನಗುವಿನಲ್ಲಿ ಸಂಕಷ್ಟಗಳು ದೂರಾಗುತ್ತಿದ್ದವು ಆದರೆ ಅವರ ನಿಧನ ಎಲ್ಲರನ್ನೂ ಮೂಕರನ್ನಾಗಿಸಿದೆ. ಜನರಿಗಾಗಿ ಅದರಲ್ಲಿಯೂ ಬಡಜನರಿಗಾಗಿ ಬದುಕಿದ ಶ್ರೀಗಳು ಬಡತನ ನಿರ್ಮೂಲನೆ, ಅನ್ನ ದಾಸೋಹ, ಸಾಮಾಜಿಕ ನ್ಯಾಯದಂಥಹ ಹಲವು ವಿಶೇಷತೆಗಳಿಗೆ ಮುನ್ನುಡಿಯಾಗಿದ್ದರು. ಆಧ್ಯಾತ್ಮಿಕತೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹನೀಯ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಸಂತಾಪ ಸೂಚಿಸಿದರು.
ಇತ್ತ ಶ್ರೀಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮೂಡಿಗೆರೆ ಪಟ್ಟಣ ನಿತ್ಯ ಚಟುವಟಿಕೆಗಳಿಂದ ದೂರವಿತ್ತು. ಜನಸಂದಣಿ ತೀರಾ ಕಡಿಮೆಯಾಗಿತ್ತು. ಹಲವರು ವಾಹನಗಳಲ್ಲಿ ಗುಂಪು ಗುಂಪಾಗಿ ಶ್ರೀಗಳ ಪಾರ್ಥೀವ ಶರೀರದ ದರ್ಶನಕ್ಕಾಗಿ ಉಡುಪಿಯ ಕಡೆ ಹೊರಟಿದ್ದು ಶ್ರೀಗಳ ಮೇಲಿನ ಅಭಿಮಾನವನ್ನು ಎತಿ ್ತತೋರಿಸುತ್ತಿತ್ತು. ಲೋಕಸಭಾ ವ್ಯಾಪ್ತಿ ಒಂದೇ ಆಗಿರುವುದರ ಜೊತೆಗೆ, ಉಡುಪಿ ನೆರೆಯ ಜಿಲ್ಲೆಯೇ ಆಗಿರುವುದರಿಂದ ಹಿಂದಿನಿಂದಲೂ ಮೂಡಿಗೆರೆ ತಾಲ್ಲೂಕಿನ ಜನತೆಗೆ ವಿಶೇಷವಾದ ಅವಿನಾಭಾವ ಸಂಬಂಧ ಇತ್ತು. ಇದೀಗ ಶ್ರೀಗಳ ನಿಧನದ ಸುದ್ದಿ ಸಹಜವಾಗಿ ಮಲೆನಾಡಿಗರಿಗೆ ದುಖಃ ಉಂಟುಮಾಡಿದ್ದು ಜನಸಾಗರ ದುಖಃದ ಮಡುವಿನಲ್ಲಿದೆ.