ಪೌರತ್ವ ತಿದ್ದುಪಡಿ ಕಾಯ್ದೆ : ಸಂವಿಧಾನ ವಿರೋಧಿಯೇ…?

452
firstsuddi

ಡಾ. ಎಂ.ಎಸ್. ಮಣಿ

ಭಾರತದ ಸಂವಿಧಾನದ ಮೂರನೆಯ ಅಂಶವಾದ `ಜಾತ್ಯಾತೀತ ಪಾತ್ರ’ವನ್ನು 1971ರ ಕೇಶವಾನಂದಭಾರತೀ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ವಿವರಿಸಿದೆ. ಅಂದರೆ, ಸಂಸತ್ತು ಯಾವುದೇ ಮಸೂದೆಯನ್ನು ಕಾನೂನು ಮಾಡಲು ಸಾಮಥ್ರ್ಯ ಮತ್ತು ಜಾರಿಗೊಳಿಸುವ ಹಕ್ಕನ್ನು ಹೊಂದಿದೆ. ಆದರೆ, ಇಂತಹ ಕಾನೂನು ಸಂವಿಧಾನದ ಮೂಲ ಸ್ವರೂಪ ಬದಲಿಸಲು ಅಥವಾ ಕುಂಠಿತಗೊಳಿಸಲು ಬರುವುದಿಲ್ಲ ಎಂದು ಹೇಳಿದೆ. ಸಂವಿಧಾನದ ಕರಡು ರಚನೆಯ ರೂವಾರಿ, ಕಾನೂನು ಕೋವಿದ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಮಾತು ಅದೇಕೋ ಇಂದು ತೀವ್ರವಾಗಿ ಕಾಡುತ್ತಿದೆ. ಭಾರತದ ಸಂವಿಧಾನ `ತಾರತಮ್ಯ’ ಅಥವಾ `ಅನ್ಯಾಯ’ ತಂದುಕೊಟ್ಟರೆ, ಅಂದೇ ಇದನ್ನು ಹರಿದು ಬಿಸಾಡುವವರಲ್ಲಿ ನಾನೇ ಮೊದಲಿಗನಾಗಿರುತ್ತೇನೆ ಎಂದು ಹೇಳಿದ್ದರು. ಬಾಬಾಸಾಹೇಬರು ಅಂದು ಹೇಳಿದ ದುಃಖಕರ ದಿನಗಳು ಇಂದು ಬಂದಂತಿದೆ.
ಹೀಗಾಗಿ ಗಾಂಧಿ, ಅಂಬೇಡ್ಕರ್, ನೆಹರು ಅವರನ್ನು ನಿಮ್ಮ ಸಮಾಧಿಯಿಂದ ಎದ್ದು ಪೌರತ್ವ ತಿದ್ದುಪಡಿ ಕಾಯ್ದೆ 2019ರ ಬಗ್ಗೆ ಮಾತನಾಡಿ ಎಂದು ಕೂಗಿ, ಕೂಗಿ ಕೇಳಬೇಕೆನಿಸಿದೆ. ಹಿಂದೆ ದೇಶ ಇಬ್ಭಾಗ ಆದಾಗಲೂ ಇಂತಹದ್ದೇ ದಂಗೆ, ಗಲಭೆಗಳು ಎದ್ದಿದ್ದವು. ಇದೀಗ `ಪೌರತ್ವ ತಿದ್ದುಪಡಿ ಕಾಯ್ದೆ 2019′, `ವಿಭಜನೆ’ಯಂತಹ ಐತಿಹಾಸಿಕ ಪ್ರಮಾದ ಕುರಿತು ಮತ್ತೆ ಚರ್ಚೆ ನಡೆಸುವಂತೆ ಎಡೆಮಾಡಿಕೊಟ್ಟಿದೆ. `ವಿಭಜನೆ’ಯನ್ನು ಕಾಣದೆ, ಓದಿ ಕಲ್ಪಿಸಿಕೊಂಡಿದ್ದ ದೊಡ್ಡ ದುರಂತ ಘಟನೆಯನ್ನು ದುಃಖದಿಂದ, ದುಗುಡದಿಂದ ಕೂಡಿದ ಘಟನೆಗಳೊಂದಿಗೆ 2019ರ ಪೌರತ್ವ ತಿದ್ದುಪಡಿ ಕಾಯ್ದೆಯೊಂದಿಗೂ ಹೋಲಿಸಿ ಮರುಕಪಡಬೇಕಿದೆ.
ಗೃಹಮಂತ್ರಿ ಅಮಿತ್ ಶಾ ಕೇಳಿರುವ ಒಂದು ಪ್ರಶ್ನೆ ನನ್ನನ್ನು ಕಾಡುತ್ತಿದೆ. “ನಮ್ಮ ದೇಶವನ್ನು ಕಾಂಗ್ರೆಸ್ ಪಕ್ಷ ಮತೀಯ ಆಧಾರದ ಮೇಲೆ ವಿಭಜಿಸಲಿಲ್ಲವೇ? ಮತೀಯ ಆಧಾರದ ಮೇಲೆ ದೇಶ ವಿಭಜಿಸಿ, ಹಿಂದೂ, ಸಿಖ್ಖರನ್ನು ವಿನಾಶ ಮಾಡಲಿಲ್ಲವೆ? ದೇಶದ ಪೂರ್ವ-ಪಶ್ಚಿಮದಲ್ಲಿ ಮುಸಲ್ಮಾನ ರಾಷ್ಟ್ರ ನಿರ್ಮಾಣ ಮಾಡಿ ಮಗ್ಗಲು ಮುಳ್ಳಾಗಿಸಲಿಲ್ಲವೇ? ವಿಭಜನೆ ಸಂದರ್ಭದಲ್ಲಿ ಪಂಜಾಬ್ ಹಾಗೂ ಬಾಂಗ್ಲಾದೇಶಗಳಲ್ಲಿ ಹಿಂದೂ ಮತ್ತು ಸಿಖ್ಖರ ಸಂಖ್ಯೆ ಎಷ್ಟಿತ್ತು? ಇಂದು ಎಷ್ಟಿದೆ ಎಂಬುದನ್ನು ಕಾಂಗ್ರೆಸ್ ಹೇಳುತ್ತದೆಯೇ? ವಿಭಜನೆ ಸಂದರ್ಭದಲ್ಲಿ 5 ಕೋಟಿ ಇದ್ದ ಮುಸಲ್ಮಾನರ ಜನರಸಂಖ್ಯೆ, ನೆರೆಹೊರೆಯಲ್ಲಿಂದ 18 ಕೋಟಿ ತಲುಪಿದೆ. ಹೀಗಿರುವಾಗ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು `ಕೋಮು ಕಾರ್ಯಸೂಚಿ’ ಅಥವಾ ದೇಶ ವಿಭಜನೆಯ ಪ್ರಯತ್ನ ಎನ್ನಲು ಕಾಂಗ್ರೆಸ್ಗೆ ನೈತಿಕತೆ ಇದೆಯೇ?’
ದೇಶದ ಸ್ವಾತಂತ್ರ್ಯ ಚಳವಳಿಯ ಅಪೂರ್ಣ ಕಾರ್ಯಸೂಚಿಯನ್ನೀಗ ಸಂಪೂರ್ಣಗೊಳಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ 2019ರಿಂದ ನೆಹರು-ಲಿಯಾಖಾತ್ ಖಾನ್ರ ಒಪ್ಪಂದದ ಗಂಭೀರ ಭರವಸೆಯನ್ನು ಹೊತ್ತು ಭಾರತದಲ್ಲಿ ನೆಲೆಸಿರುವ ನಿರಾಶ್ರಿತರಿಗೆ ನ್ಯಾಯ ಒದಗಿಸಿದಂತಾಗಿದೆ. ಇದು ನಮ್ಮ `ರಾಷ್ಟ್ರೀಯ ಬದ್ಧತೆ’ ಮತ್ತು `ಸರ್ಕಾರದ ಕರ್ತವ್ಯ ಬದ್ಧತೆ’ಯಿಂದ ನೆರವೇರಿದೆ ಎಂಬುದು ಭಾಜಪ ಮುಖಂಡರ ಅಭಿಮತವಾಗಿದೆ.
ಭಾಜಪ ಪ್ರಕಾರ ದೇಶ ವಿಭಜನೆಯಿಂದಾದ ಐತಿಹಾಸಿಕ ಪ್ರಮಾದವನ್ನು ಪೌರತ್ವ ತಿದ್ದುಪಡಿ ಕಾಯ್ದೆ 2019 ಸರಿಪಡಿಸಲಿದೆ. ಮುಸಲ್ಮಾನರನ್ನು ಹೊರತುಪಡಿಸಿ ಮತೀಯ ಪೀಡನೆಗೆ ಒಳಗಾಗಿರುವ ಅಲ್ಪಸಂಖ್ಯಾತರ ಹಿತಕಾಯಬೇಕಿದೆ. ಇಂತಹ ಸಬೂಬುಗಳೊಂದಿಗೆ, ಪೌರತ್ವ ತಿದ್ದುಪಡಿ ಕಾಯ್ದೆ 2019 ಎರಡು ಸ್ಪಷ್ಟ ಉದ್ದೇಶವನ್ನು ಹೊಂದಿದೆ. ಒಂದು ವ್ಯಕ್ತವಾದದ್ದು, ಇನ್ನೊಂದು ಅವ್ಯಕ್ತವಾದದ್ದು. `ವ್ಯಕ್ತವಾದ ಉದ್ದೇಶ’ ಎಂದರೆ, ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ಕಿರುಕುಳ ತಾಳಲಾರದೆ ಭಾರತಕ್ಕೆ ಓಡಿಬಂದಿರುವ ಹಿಂದೂ, ಬೌದ್ಧ, ಜೈನ, ಕ್ರೈಸ್ತ, ಪಾರ್ಸಿ, ಸಿಖ್ಖ್ ಅಕ್ರಮ ನಿರಾಶ್ರಿತರಿಗೆ ಪೌರತ್ವ ನೀಡುವುದು. `ಅವ್ಯಕ್ತ ಉದ್ದೇಶ’ ಎಂದರೆ, `ಹಿಂದೂ ಮತಬ್ಯಾಂಕ್’ನ್ನು ಗಟ್ಟಿಗೊಳಿಸಿಕೊಳ್ಳುವುದು. ಜೊತೆಗೆ `ಕಿರುಕುಳ’ ಎಂದು ಓಡಿ ಬಂದ ಮುಸಲ್ಮಾನೇತರ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಿ ಅಪ್ಪಿಕೊಳ್ಳುವ ಮೂಲಕ ಅವರ ಅನುಕಂಪವನ್ನು ಗಿಟ್ಟಿಸುವುದು.
ಇಂತಹ ಉದ್ದೇಶ, ಸಬೂಬು ಯಾವುದೇ ಇದ್ದರೂ, ಪೌರತ್ವ ತಿದ್ದುಪಡಿ ಕಾಯ್ದೆ 2019 ಭಾರತೀಯ ಪೌರತ್ವ ನೀಡುವ `ಮೂಲ ಆಧಾರ’ವನ್ನೇ ಬದಲಿಸಿಬಿಟ್ಟಿದೆ. ಭಾರತದ ನಾಗರಿಕನಾಗಲು ಇಂದು `ಧರ್ಮ’ವೇ ಪ್ರಮುಖ ಮಾನದಂಡ ಆಗಿದೆ. ಆದರೆ, 1955ರ ಪೌರತ್ವ ಕಾಯ್ದೆಯಂತೆ `ಪೌರತ್ವ’ ಪಡೆಯಲು 5 ಮಾದರಿಯಲ್ಲಿ ಅವಕಾಶ ಕಲ್ಪಿಸುತ್ತದೆ. ಅದು `ಹುಟ್ಟಿನಿಂದ ಪೌರತ್ವ’ಕಲ್ಪಿಸುತ್ತದೆ.’ `ಮೂಲದಿಂದ ಪೌರತ್ವ ಕಲ್ಪಿಸುತ್ತದೆ.’ `ನೋಂದಣಿ ಮೂಲಕ ಪೌರತ್ವ ಕಲ್ಪಿಸುತ್ತದೆ.’ `ದೇಶೀಕರಣದ ಮೂಲಕ ಪೌರತ್ವ ಕಲ್ಪಿಸುತ್ತದೆ.’ `ಕೆಲವು ಪ್ರದೇಶ ಸಂಯೋಜನೆಯಿಂದಲೂ ಪೌರತ್ವ ಕಲ್ಪಿಸುತ್ತದೆ.’ `ನೈಸರ್ಗೀಕರಣದಿಂದಲೂ ಪೌರತ್ವ ಕಲ್ಪಿಸುತ್ತದೆ.’
`ಧಾರ್ಮಿಕ ಮಾನದಂಡ’ದ ತಳಹದಿಯನ್ನು ನಮ್ಮ ಸಂವಿಧಾನದ ನಿರ್ಮಾಪಕರು, ಸ್ವಾತಂತ್ರ್ಯ ಹೋರಾಟದ ರೂವಾರಿಗಳು ನಿರಾಕರಿಸಿದ್ದರು, ಇದರ ಅರಿವಿದ್ದರೂ ಕಾಯ್ದೆ ಜಾರಿಯಾಗಿದೆ. ತಿದ್ದುಪಡಿ ಕಾಯ್ದೆಯನ್ನು ವಿಪಕ್ಷಗಳೆಲ್ಲವೂ ಒಂದಾಗಿ ಬಂದರೂ ವಾಪಸ್ ಪಡೆಯುವುದಿಲ್ಲ ಎಂದು ಗೃಹಮಂತ್ರಿ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಆದರೆ, ಚರ್ಚೆಯಾಗಬೇಕಾದದ್ದೇ ಇನ್ನೂ ಬಾಕಿ ಇದೆ. ಅದು ಪೌರತ್ವ ತಿದ್ದುಪಡಿ ಕಾಯ್ದೆ? 2019 ಭಾರತೀಯ ಸಂವಿಧಾನದ ಮೂಲ ಸಂರಚನೆಯನ್ನು ದುರ್ಬಲಗೊಳಿಸುತ್ತದೆಯೇ? ಇದು ಅಸಂವಿಧಾನಿಕವೇ? ಇದರ ವಿನ್ಯಾಸ ಮತ್ತು ಗುರಿ ಕೂಡ ಗೊಂದಲಮಯವಾಗಿದ್ದು, ಅಸ್ಪಷ್ಟತೆಯಿಂದ ಕೂಡಿದೆ. ಮುಖ್ಯವಾಗಿ ಧಾರ್ಮಿಕ ಪೀಡನೆಗೆ ಗುರಿಯಾಗಿರುವ ಅಲ್ಪಸಂಖ್ಯಾತರ ಹಿತಕಾಯುವುದೇ ಅಥವಾ 1947ರಲ್ಲಿ ವಿಭಜಿಸಿದಂತಹ ಕಾರ್ಯಸೂಚಿಯೇ? `ದ್ವಿರಾಷ್ಟ್ರ’ ಸಿದ್ಧಾಂತದ ಪ್ರಕಟಣೆಯೇ?
ಇರಲಿ, 1976ರಲ್ಲಿ ಸಂವಿಧಾನಿಕ ತಿದ್ದುಪಡಿ ತಂದುಕೊಂಡು `ನಾವು ಭಾರತೀಯರು’ ನಮ್ಮ ದೇಶ `ಜಾತ್ಯಾತೀತ ರಾಷ್ಟ್ರ’ ಎಂದು ಘೋಷಿಸಿಕೊಂಡೆವು. ನಮ್ಮ ಸಂವಿಧಾನದ ಎರಡು ಪ್ರಮುಖ ಪರಿಕಲ್ಪನೆಗಳಾದ `ಜಾತ್ಯಾತೀತ’ ಮತ್ತು `ಸಮಾಜವಾದಿ’ ಎಂಬುದನ್ನು ಕಿತ್ತುಹಾಕುವುದಿಲ್ಲವೋ ಅಲ್ಲಿಯವರೆಗೂ ಇವುಗಳನ್ನು ಸಂವಿಧಾನದ ಪುಸ್ತಕಗಳಲ್ಲಾದರೂ ಕಾಣಬಹುದು. ಹಾಗಾದರೆ, ನಮ್ಮ ದೇಶ ನಿಜಕ್ಕೂ `ಜಾತ್ಯಾತೀತ’ ಮತ್ತು `ಸಮಾಜವಾದಿ’ ರಾಷ್ಟ್ರವಾಗಿತ್ತೇ ಎಂಬ ಪ್ರಶ್ನೆ ಏಳಬಹುದು. ಇದು ನಿಜಕ್ಕೂ ಚರ್ಚೆ ಮಾಡಬೇಕಾದ ವಿಚಾರ. ನಮ್ಮ ದೇಶ `ಜಾತ್ಯಾತೀತ’ ಮತ್ತು `ಸಮಾಜವಾದಿ’ ಆಗಿತ್ತೆಂದು ಯಾರು ನಂಬಿದ್ದರೋ ಅವರು ಮೂರ್ಖರ ಸ್ವರ್ಗದಲ್ಲಿ ವಿಹರಿಸುತ್ತಿದ್ದರೆಂದೇ ಹೇಳಬಹುದು.
ಪೌರತ್ವ ತಿದ್ದುಪಡಿ ಕಾಯ್ದೆಯಂತೆ ನೆರೆಯ ರಾಷ್ಟ್ರಗಳಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಧಾರ್ಮಿಕತೆಯ ಆಧಾರದ ಮೇಲೆ ಪೌರತ್ವ ಕಲ್ಪಿಸಲಾಗುತ್ತಿದೆ. ಇದು ಮೂಲಭೂತವಾಗಿ ಕಾರ್ಯಸಾಧುವಲ್ಲ. ನಮ್ಮ ಸಂವಿಧಾನದ ಅನುಚ್ಛೇದ 14ಕ್ಕೆ ವಿರುದ್ಧವಾಗಿದೆ. ಇದನ್ನು `ಸಮಂಜಸವಾದ ವರ್ಗೀಕರಣ’ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಕಾನೂನಿನ ದೃಷ್ಟಿಯಲ್ಲಿ ಇದು ಸಮರ್ಥನೀಯವಲ್ಲ. ಅಲ್ಲದೆ ಇದನ್ನು `ಸಮಂಜಸವಾದ ವರ್ಗೀಕರಣ’ ಎನ್ನುವುದಕ್ಕಿಂತ `ವರ್ಗಶಾಸನ’ ಎಂದೇ ಹೇಳಬಹುದು. ಹೀಗಾಗಿ ಕಾಯ್ದೆಯೂ ಮೂಲಭೂತವಾಗಿ ತಪ್ಪು ಮತ್ತು ಅಸಂವಿಧಾನಿಕತೆಯಿಂದ ಕೂಡಿದೆ. ಮಿಗಿಲಾಗಿ ಸಂವಿಧಾನದ ಪ್ರಸ್ತಾವನೆಯ ಅನುಚ್ಛೇದ 15, 25, 29 ಮತ್ತು 30ನ್ನು ಉಲ್ಲಂಘಿಸುತ್ತದೆ. ಅಲ್ಲದೆ 51ಸಿ ಮತ್ತು 253 ಅಂತರ ರಾಷ್ಟ್ರೀಯ ಕಾನೂನನ್ನು ಗೌರವಿಸಲು ಕಟ್ಟುಪಾಡು ವಿಧಿಸುತ್ತದೆ.
ಪೌರತ್ವ ತಿದ್ದುಪಡಿ ಕಾಯ್ದೆ 2019 ವಿನಾಯಕ ದಾಮೋದರ ಸಾವರ್ಕರ್ ಅವರ `ಪಿತೃಭೂಮಿ’ ಮತ್ತು `ಪುಣ್ಯಭೂಮಿ’ಯ ಪರಿಕಲ್ಪನೆಯನ್ನು ಹೊಂದಿದೆ. ಇದನ್ನು ಮರೆಮಾಚಲು ಪೌರತ್ವವನ್ನು ಕ್ರೈಸ್ತರಿಗೂ, ಪಾರ್ಸಿಗಳಿಗೂ ನೀಡಲಾಗುತ್ತಿದೆ. ಇದು ನಮ್ಮ ಸಂವಿಧಾನ ಮತ್ತು ಸಂವಿಧಾನದ ನೈತಿಕತೆಯನ್ನು ದುರ್ಬಲಗೊಳಿಸುತ್ತದೆ. ಇದನ್ನು ಪುನರುತ್ಥಾನಗೊಳಿಸುವ ಜವಾಬ್ದಾರಿ ನಮ್ಮ ದೇಶದ ನ್ಯಾಯಾಂಗದ ಮೇಲಿದೆ.
ಇದನ್ನು ವಿಡಂಬನೆ ಎನ್ನಬೇಕೋ ಅಥವಾ ವಿಪರ್ಯಾಸ ಎನ್ನಬೇಕೋ ಅರಿವಾಗುತ್ತಿಲ್ಲ. ಅವತ್ತು ಇಂಗ್ಲೆಂಡಿನ ಐರಿಶ್ ರಾಕ್ಬ್ಯಾಂಡ್ ಯು2 ಮಹಾತ್ಮ ಗಾಂಧೀಜಿಯವರ `ಅಹಿಂಸೆ’ಯ ತತ್ವವನ್ನು ಗೌರವಿಸಿ ಮುಂಬೈನಲ್ಲಿ ಎ.ಆರ್. ರೆಹಮಾನ್ ನೇತೃತ್ವದಲ್ಲಿ ಸಂಗೀತ ಕಛೇರಿ ನಡೆಸುತ್ತಿತ್ತು. ಇದೇ ಸಮಯದಲ್ಲಿ ದೆಹಲಿ, ಮಂಗಳೂರು, ಕಲ್ಕತ್ತಾ ಸೇರಿ ಇತರೆಡೆ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ವಿರೋಧಿಸಿ ಪ್ರತಿಭಟನೆಯೂ ನಡೆಯುತ್ತಿತ್ತು. ಇಲ್ಲಿಂದ ಪ್ರತಿಭಟನೆ, ಲಾಠಿಪ್ರಹಾರ, ಗೋಲಿಬಾರ್, ಸೆಕ್ಷನ್ 144, ದೊಂಬಿ, ಗಲಾಟೆ ದೇಶದ ತುಂಬಾ ವ್ಯಾಪಿಸಿತು. ಇದರಿಂದ ವಿಶ್ವವಾಸಿಗಳ ಮನಸುಗಳಲ್ಲಿ ನಮ್ಮ ದೇಶ `ವಿಭಜನಾತ್ಮಕ’ ಚಿಹ್ನೆಯ ಸ್ಥಾನ ಪಡೆಯಿತು. ಪ್ರಧಾನಿಯವರ 2.0 ರಾಜತಾಂತ್ರಿಕತೆಯಿಂದ ತೀರಾ ಮಿತ್ರರಾಗಿದ್ದ ಅಮೆರಿಕಾ ಮತ್ತು ಫ್ರಾನ್ಸ್ ನಮ್ಮ ದೇಶಕ್ಕೆ ಬರುವವರಿಗೆ ಪ್ರವಾಸಿ ಅಡ್ವೈಸರಿಗಳನ್ನು ನೇಮಿಸಿತು. ಪ್ರತಿ ನಾಗರಿಕರ ಪರಮೋಚ್ಛ ಹಕ್ಕಾದ `ಪ್ರತಿಭಟಿಸುವ ಹಕ್ಕ’ನ್ನು ನಿಗ್ರಹಗೊಳಿಸಲು ಪ್ರಯತ್ನಿಸಲಾಯಿತು. ಪ್ರತಿಭಟನೆಯ ಆರಂಭಿಕ ಹಂತದಲ್ಲೇ ಪ್ರಚೋದಿಸಿ ಗೋಲಿಬಾರ್ ಎಸಗಲಾಗಿದೆ. ಹಿಂಸಾಚಾರ, ಬೆಂಕಿ ಹಚ್ಚುವಿಕೆ, ಕಲ್ಲು ತೂರಾಟ, ಪುಂಡಾಟಗಳನ್ನು ಯಾರೇ ಎಸಗಿದ್ದರೂ ಅದು `ಕ್ಷಮಾರ್ಹವಲ್ಲ.’ ಮಂಗಳೂರಿನಲ್ಲಿ ಪೊಲೀಸರೇ ಮೊದಲಿಗೆ ದಂಡ, ಗುಂಡು ಪ್ರಯೋಗಿಸಿರುವರೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವೀಡಿಯೋ ಬಿಡುಗಡೆಗೊಳಿಸಿ ಆಪಾದನೆ ಮಾಡಿದ್ದಾರೆ.
ನಿರಂಕುಶ ಆಡಳಿತ ಹೊಂದಿರುವ ಚೀನಾ ಕೈಯಲ್ಲಿ ಅಂತರ್ಜಾಲ ಸ್ಥಗಿತಗೊಳಿಸಲು ಸಾಧ್ಯವಾಗಲಿಲ್ಲ. ಹಾಂಕಾಂಗ್ನಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿ, ಕಾನೂನು ಸುವ್ಯವಸ್ಥೆ ಹದಗೆಟ್ಟಾಗಲು ಸಾಮಾಜಿಕ ಜಾಲತಾಣದ ಮೇಲೆ ಚೀನಾ ನಿರ್ಬಂಧಿಸಲು ಮುಂದಾಗಲಿಲ್ಲ. ಆದರೆ, ಭಾರತ ಕಾಶ್ಮೀರದಲ್ಲಿ ಅನುಚ್ಛೇದ 370ನ್ನು ತೆರವುಗೊಳಿಸಿದಾಗಿನಿಂದಲೂ ಕೆಲವೆಡೆ ಅಂತರ್ಜಾಲ ಬಂದ್ ಮಾಡಿತ್ತು. ಸುಪ್ರಿಂ ಕೋರ್ಟ್ ಸೂಚನೆಯನ್ವಯ ತೆರವುಗೊಳಿಸಲಾಗಿದೆ. ಮಂಗಳೂರಿನಲ್ಲೂ ವಿದ್ಯಾರ್ಥಿಗಳ ಮತ್ತು ನಾಗರಿಕ ಪ್ರತಿಭಟನೆಯ ಸಮಯದಲ್ಲಿ ಬಂದ್ ಮಾಡಲಾಗಿತ್ತು. ವಿದ್ಯಾರ್ಥಿ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಬೇಟೆಯಾಡುವುದು ಫ್ಯಾಸಿಸ್ಟ್ ಧೋರಣೆಯಾಗುತ್ತದೆ. ಇದು ನಮ್ಮ ಸಂವಿಧಾನವನ್ನೇ ಅಪಹಾಸ್ಯಗೊಳಿಸಿದಂತಾಗುತ್ತದೆ.
ದೇಶದ ಕೆಲವೆಡೆ ವಿದ್ಯಾರ್ಥಿಗಳ ಸಭೆಯನ್ನು ಕೂಡ `ಸಮಾಜಕ್ಕೆ ಗಂಡಾಂತರ’ ಎಂದು ಬಿಂಬಿಸಿ, ಊಹಿಸಿದ್ದು ತಪ್ಪು. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದೊಳಗೆ ಉಪಕುಲಪತಿಗಳಿಗೆ ಗೊತ್ತಿಲ್ಲದೆಯೇ ಪೊಲೀಸರು ನುಗ್ಗಿದ್ದರು. ಗ್ರಂಥಾಲಯ, ವಸತಿ ನಿಲಯದಲ್ಲಿ, ಶೈಕ್ಷಣಿಕ ಕಾರ್ಯಗಳಲ್ಲಿ ಭಾಗಿಯಾದವರನ್ನು ನಿಯಂತ್ರಿಸಲು ಮುಂದಾದರು. ಪೊಲೀಸರಿಗಿಲ್ಲಿ `ಮೃಧುಧೋರಣೆ’ ಎಂಬುದನ್ನೇ ಮರೆತಿದ್ದರು. ವಿಶ್ವವಿದ್ಯಾಲಯಗಳಲ್ಲಿ `ಹಿಂಸಾಚಾರ’ ತಡೆಗಟ್ಟಬೇಕು, ಎಂಬುದಕ್ಕಿಂತ ವಿದ್ಯಾರ್ಥಿಗಳನ್ನು ನಿಯಂತ್ರಿಸಬೇಕೆಂಬ ಉದ್ದೇಶ ಹೊಂದಿದ್ದರು.
ಎಲ್ಲಾ ಮಾದರಿಯ ಬಲಪ್ರಯೋಗ ಮಾಡಿದರೂ, ವಿದ್ಯಾರ್ಥಿಗಳು ಎದೆಗುಂದದೆ ಒಗ್ಗೂಡುತ್ತಲೇ ಇದ್ದಾರೆ. ಅದು ಆಲಿಘರ್ ವಿಶ್ವವಿದ್ಯಾಲಯ, ಬನಾರಸ್ ವಿದ್ಯಾಲಯ, ಮುಂಬೈನ ಐ.ಐ.ಟಿ ಮತ್ತು ಟಿ.ಐ.ಎಸ್.ಎಸ್. ಅಥವಾ ಹೈದರಾಬಾದ್, ಬೆಂಗಳೂರು, ಮಂಗಳೂರು, ಚೆನ್ನೈ, ಕೊಲ್ಕತ್ತಾ ಯಾವುದೇ ವಿಶ್ವವಿದ್ಯಾಲಯ ಆಗಿರಬಹುದು. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಕ್ಕೆ ಆಕೆಯ ದೇಶಪ್ರೇಮವನ್ನು ಅನುಮಾನದಿಂದ ಕಾಣುತ್ತಿದ್ದಾರಂತೆ. ಸಾಲದ್ದಕ್ಕೆ ಈಕೆಯ ರಾಷ್ಟ್ರೀಯತೆಯನ್ನು ಪ್ರಶ್ನಿಸುತ್ತಿದ್ದಾರಂತೆ. ಇದು ರಾಜಕೀಯ ಉಲ್ಬಣಗೊಳ್ಳುವಿಕೆಯನ್ನು ತೋರುತ್ತದೆ.
ತೊಂದರೆ ಉಂಟುಮಾಡುವವರನ್ನು ಸುಲಭವಾಗಿ ವಜಾಗೊಳಿಸಬಹುದು. ಅದು ಅವರು ಧರಿಸಿರುವ ಧಿರಿಸು ಕಂಡು ಕಂಡುಹಿಡಿಯಬಹುದೆಂದು ಪ್ರಧಾನಿಗಳು ಹೇಳಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಷರ್ಟನ್ನು ಬಿಚ್ಚಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಇಲ್ಲಿ ಕಣ್ಗಾವಲು ಅಥವಾ ಶಾಂತಿಪಾಲನೆ ಎಂದರೆ, ದಮನವಲ್ಲ, ನಿರಂಕುಶಾಧಿಕಾರಿಗಳು ಕೂಡ ಸುನಾಮಿಯಂತೆ ಏಳುವ ವಿದ್ಯಾರ್ಥಿಗಳ ಚಳವಳಿಯನ್ನು ಹತ್ತಿಕ್ಕಲು ಬುದ್ಧಿವಂತಿಕೆಯಿಂದ ಹಿಂದೆ ಸರಿಯುತ್ತಾರೆ. ಚೈನಾ ಕೂಡ ಹಾಂಕಾಂಗ್ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಮೇಲೆ ಸೇನೆಯನ್ನು ಬಳಸಲಿಲ್ಲ. 1987 ಜೂನ್4ರಂದು ತಿನಾನ್ ಮೆನ್ ಚೌಕದ ದುಸ್ಸಾಹಸದ ನಂತರ ಚೈನಾ ತನ್ನ ಧೋರಣೆಯನ್ನು ಬದಲಿಸಿಕೊಂಡಿದೆ. ಇರಾನ್ನಲ್ಲಿಯೂ ವಿದ್ಯಾರ್ಥಿಗಳ ಪ್ರತಿಭಟನೆ ಮುಗಿಲು ಮುಟ್ಟಿತ್ತು. ಆಗ ವಿದ್ಯಾರ್ಥಿಗಳು ಅಯಾತುಲ್ಲಾ ಖೋಮೇನಿಯ ಭಿತ್ತಿಪತ್ರಗಳನ್ನು ಹರಿದು, ದಹಿಸಿ, ಪ್ರತಿಭಟಿಸಿದ್ದರು. ಆದರೂ, ವಿದ್ಯಾರ್ಥಿಗಳ ಮೇಲೆ ಕೈಮಾಡಬೇಡಿ ಎಂದು ನಿರ್ದೇಶನ ನೀಡಿದ್ದರು. ಇದೇ ರೀತಿಯಲ್ಲಿ ನಮ್ಮ ದೇಶದ ಪ್ರಧಾನಿ ಕೂಡ “ಮೋದಿಯನ್ನು ದ್ವೇಷಿಸಿ, ಆದರೆ ಭಾರತವನ್ನು ದ್ವೇಷಿಸಬೇಡಿ. ನನ್ನ ಪ್ರತಿಕೃತಿ ಸುಡಿ ಮತ್ತು ಅದಕ್ಕೆ ಬೂಟಿನಿಂದ ಹೊಡೆಯಿರಿ. ಆದರೆ, ಸಾರ್ವಜನಿಕ ಆಸ್ತಿಪಾಸ್ತಿ ಅಥವಾ ಬಡವನ ಆಟೋ ಸುಡಬೇಡಿ” ಎಂದು ವಿನಂತಿಸಿದ್ದಾರೆ. ಆದರೆ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವುದು ಇಡೀ ದೇಶವನ್ನೇ ವಿರೋಧಿಸಿದಂತೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಕಾಂಗ್ರೆಸ್ ಹಾಗೂ ಪಾಕಿಸ್ತಾನದ್ದು ಒಂದೇ ಭಾಷೆಯಾಗಿದೆ ಎಂದು ಕಿಡಿಕಾರಿದ್ದಾರೆ.
ನಾವಿಲ್ಲಿ ವಿದ್ಯಾರ್ಥಿಗಳನ್ನು ಮೌನವಾಗಿಸಲು ಸಾಧ್ಯವಿಲ್ಲ. ಕಾರಣ, ಅವರು ಬಂಡೇಳುವಂತೆ ರಾಜಕೀಯ ಪಕ್ಷಗಳೇ ತರಬೇತಿ ನೀಡಿರುತ್ತವೆ. ಅತಿಯಾದ ಆದರ್ಶ ಹೊಂದಿರುವ ನಾವುಗಳು ನ್ಯಾಯಯುತ ಬದುಕು ಕಟ್ಟಿಕೊಳ್ಳಲು ಬೇಕಾದ ವ್ಯವಸ್ಥೆ ಒದಗಿಸಲು ವಿಫಲರಾಗಿದ್ದೇವೆ. ಹಾಗೆಯೇ ಯಥಾಸ್ಥಿತಿ ವಾದವನ್ನು ಪ್ರಶ್ನಿಸುತ್ತೇವೆ.
ಇರಲಿ, ಭಾಜಪದ ಕಾರ್ಯಕರ್ತರಿಗಾಗಲಿ, ಮುಖಂಡರಿಗಾಗಲಿ, ವಕ್ತಾರರಿಗಾಗಲಿ ಪೌರತ್ವ ತಿದ್ದುಪಡಿ ಕಾಯ್ದೆ 2019 ಯಾವುದೇ ತಾರತಮ್ಯ ಹೊಂದಿಲ್ಲ. ದೇಶದೊಳಗೆ ನಿರಾಶ್ರಿತರಾಗಿ ಸಹಸ್ರಾರು ಸಂಖ್ಯೆಯಲ್ಲಿರುವವರಿಗೆ ಪೌರತ್ವ ನೀಡಲಾಗುತ್ತಿದೆ. ಇವರುಗಳು ತಮ್ಮ ಅಸ್ಮಿತೆಯನ್ನು ಮಾತ್ರವಲ್ಲದೆ, ಮೂಲ ಅಸ್ತಿತ್ವವನ್ನು ಕಳೆದುಕೊಂಡು ನಮ್ಮ ದೇಶಕ್ಕೆ ಬಂದು ಆಶ್ರಯ ಪಡೆದಿದ್ದಾರೆ. `ದೇಶ ವಿಭಜನೆ’ ಸಂದರ್ಭದಲ್ಲಿ `ಧಾರ್ಮಿಕ ನೆಲೆ’ಯಲ್ಲಿ ಉಂಟಾದ ಪ್ರಮಾದವನ್ನು ಈಗ ಸರಿಪಡಿಸುವ ಕಾಲ ಕೂಡಿ ಬಂದಿದೆ. ಹೀಗಾಗಿ ನಿಸ್ಸಾಹಯಕ ಅಸ್ಪಸಂಖ್ಯಾತರಿಗೂ, ಅಸಹಾಯಕ ಹಿಂದೂಗಳಿಗೂ ಇದೀಗ ನ್ಯಾಯ ಒದಗಿಸಬೇಕಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿ ಆಳುವವರ ನಂಬಿಕೆ ದ್ರೋಹಕ್ಕೆ ಬೆಲೆತೆತ್ತವರಿಗೆ ನ್ಯಾಯ ಒದಗಿಸಲಾಗುತ್ತಿದೆ. ಕೇವಲ ಮತಬ್ಯಾಂಕ್ ರಾಜಕೀಯ ಮಾಡಿಕೊಂಡು `ರಾಜಕೀಯ ಫಸಲು’ ತೆಗೆಯುತ್ತಿದ್ದ ರಾಜಕೀಯ ಪಕ್ಷಗಳಿಗೆ `ಅಸ್ಥಿರತೆ’ಯ ಚಡಪಡಿಕೆ ಶುರುವಾಗಿದೆ.
ಕಾಯ್ದೆಯನ್ನು ವಿರೋಧಿಸುತ್ತಿರುವ ಬಹುತೇಕ ಸಂಸದರಿಗೆ ಮುಸಲ್ಮಾನರು ವಂಚಿತರಾಗುವುದು ಬೇಕಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಆಗಮಿಸುವ ಮುಸಲ್ಮಾನ ನಿರಾಶ್ರಿತರಿಗೂ ಪೌರತ್ವ ಸಿಗಬೇಕು ಎಂಬುದು ಇವರುಗಳ ವಾದವಾಗಿದೆ. ಕಾಂಗ್ರೆಸ್ ಮುಸ್ಲಿಂ ಲೀಗ್ನ ಪ್ರಭಾವದಲ್ಲಿದೆ. ಮುಸಲ್ಮಾನರು, ಮುಸಲ್ಮಾನೇತರರು ಪ್ರಾಬಲ್ಯವಿರುವ ದೇಶದಲ್ಲಿ ಬದುಕಲು ಸಾಧ್ಯವಿಲ್ಲ. ಕಾರಣ, ಎರಡು ಧರ್ಮಗಳ ನಡುವೆ ಧಾರ್ಮಿಕವಾಗಿ ಸಾಕಷ್ಟು ಮೂಲಭೂತ ವ್ಯತ್ಯಾಸಗಳಿವೆ. ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನ ಮಾದರಿಯಲ್ಲಿ ತಮಗೂ ಪ್ರತ್ಯೇಕ ತಾಯ್ನಾಡು ರಚಿಸಿಕೊಡಿ ಎಂಬ ಬೇಡಿಕೆಯ ಬಯಕೆಯನ್ನು ಅಂತರಂಗದಲ್ಲಿ ಹೊಂದಿದ್ದಾರೆ. ಹೀಗಿರುವಾಗ ಅದೇಕೆ ಇವರುಗಳು ನಮ್ಮ ದೇಶಕ್ಕೆ ನಿರಾಶ್ರಿತರಾಗಿ ಬರುತ್ತಿದ್ದಾರೆ. ನಮ್ಮ ದೇಶದ ಸಂಸ್ಕøತಿ ಹೊಂದಾಣಿಕೆಯಾಗುತ್ತಿಲ್ಲ ಎನ್ನುವವರಿಗೆ ನಮ್ಮ ದೇಶದ ಪೌರತ್ವವಾದರೂ ಏಕೆ ಬೇಕಿದೆ ಎಂಬುದು ಭಾಜಪದ ವಾದವಾಗಿದೆ.
ಇದರಿಂದ ಉದ್ದೇಶವೇ ಇಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಬಂಡುಕೋರರು ವಿರೋಧಿಸುತ್ತಿದ್ದಾರೆಂದು ಎಲ್ಲರೂ ನಂಬಬೇಕಿದೆ. ಇದು ಕೇವಲ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮುಸಲ್ಮಾನರಿಗಷ್ಟೇ ತಾರತಮ್ಯ ಎಸಗಿಲ್ಲ. ಶ್ರೀಲಂಕಾದ ತಮಿಳು ಈಳಂನ ಎಲ್ಲಾ ಸಮುದಾಯಗಳಿಗೂ ತಾರತಮ್ಯ ಎಸಗಲಾಗಿದೆ. ತಮಿಳು ಈಳಂ ಸಮುದಾಯದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದು ಪಕ್ಕದ ತಮಿಳುನಾಡಿನಲ್ಲಿಯೇ ಇದ್ದಾರೆ. ಭಾಜಪ ಇಲ್ಲಿ ಒಂದೇ ಒಂದು ಸೀಟನ್ನು ಗೆದ್ದಿಲ್ಲ. ಇದಕ್ಕಾಗಿ ನಿರಾಶ್ರಿತರನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ. ಕಾರಣ, ಇವರುಗಳಿಗೆ ಮತದಾನದ ಹಕ್ಕೇ ಇಲ್ಲ. 1983ರಿಂದ 2009ರ ವರೆಗೆ ಶ್ರೀಲಂಕಾದಿಂದ 1.5 ಮಿಲಿಯನ್ ಹಿಂದೂ ಧರ್ಮೀಯರನ್ನು ಅಲ್ಲಿನ ಅಂರ್ತಯುದ್ಧದಲ್ಲಿ ಕೊಲ್ಲಲಾಗಿದೆ. ಕಾರಣ, ಇವರುಗಳು ಸಿಂಹಿಳಿಯರ ಆಡಳಿತವನ್ನು ಒಪ್ಪಿರಲಿಲ್ಲ. ಯುದ್ಧದ ಸಂದರ್ಭದಲ್ಲಿ 3 ಲಕ್ಷಕ್ಕೂ ಅಧಿಕ ಜನ ಸಾಲಾಗಿ ಬಂದು ತಮಿಳುನಾಡಿನಲ್ಲಿ ನೆಲೆಸಿ, ಆಶ್ರಯ ಪಡೆದಿದ್ದಾರೆ.
ಇದರ ನಡುವೆ 2009ರಲ್ಲಿ ಬಹುತೇಕ ವಲಸಿಗರು ಮರಳಿ ಶ್ರೀಲಂಕಾಗೆ ಮತ್ತು ಜಗತ್ತಿನ ಇತರೆಡೆ ಧಾವಿಸಿದ್ದಾರೆ. ಇನ್ನೂ 95 ಸಾವಿರ ಜನ ನಿರಾಶ್ರಿತರು ತಮಿಳುನಾಡಿನಲ್ಲಿಯೇ ಜೀವಕಳೆಯುತ್ತಿದ್ದಾರೆ. ಇಲ್ಲಿನ ಎಐಎಡಿಎಂಕೆ ಪೌರತ್ವ ತಿದ್ದುಪಡಿ ಮಸೂದೆ ಬೆಂಬಲಿಸಿ ಮತದಾನ ಮಾಡಿ, ಇಲ್ಲಿರುವ ನಿರಾಶ್ರಿತರಿಗೆ ದ್ರೋಹಬಗೆದಿದೆ. ಹೀಗಾಗಿ ಇಲ್ಲಿನ ನಿರಾಶ್ರಿತರು ಭಯದೊಂದಿಗೆ ಭೀತಿಯಿಂದ ಬಂಧನ ಕೇಂದ್ರಗಳಲ್ಲಿ ಬದುಕು ದೂಡುತ್ತಿದ್ದಾರೆ.
ಇಷ್ಟಕ್ಕೂ ಇಲ್ಲಿ ನೆರೆಯ ಮೂರು ದೇಶಗಳನ್ನು ಮಾತ್ರ ಗುರಿಯಾಗಿಟ್ಟುಕೊಂಡು ಕಾಯ್ದೆ ರೂಪಿಸಿರುವುದು ಪ್ರಮುಖ ಆಕ್ಷೇಪಣೆಯಾಗಿದೆ. ಈ ಹಿಂದೆಯೂ ಯುದ್ಧ ಮತ್ತು ಸಾಮಾಜಿಕ ಶ್ರಮದ ಕಾರಣಗಳಿಗಾಗಿ ನಿರ್ದಿಷ್ಟ ದೇಶಗಳ ನಿರಾಶ್ರಿತರಿಗೆ ಪೌರತ್ವ ನೀಡಿದ ಉದಾಹರಣೆಗಳಿವೆ. ಆಫ್ರಿಕಾ ದೇಶದ ಉಗಾಂಡದಿಂದ ಬದುಕು ಕಟ್ಟಿಕೊಳ್ಳಲು ಬಂದ ನಿರಾಶ್ರಿತರಿಗೂ `ಸ್ವತಂತ್ರ ವಿಧಾನ’ದಡಿ ಪೌರತ್ವ ನೀಡಲಾಗಿದೆ. ಚೀನಾದವರ ಕಾಟ ತಡೆಯಲಾರದೆ ಭಾರತಕ್ಕೆ ಬಂದ ಬೌದ್ಧ ಗುರು ದಲೈ ಲಾಮ ಅವರಿಗೂ ಆಶ್ರಯ ನೀಡಲಾಗಿದೆ. ಮಡಿಕೇರಿಯ ಬೈಲುಕುಪ್ಪೆಯಲ್ಲಿ ಅತಿದೊಡ್ಡ ಬೌದ್ಧ ವಿಹಾರವೂ ಇದೆ.