ಪ್ರತಿವರ್ಷ 1000ಸಿ ದರ್ಜೆಯ ದೇವಸ್ಥಾನಗಳ ಸಮಗ್ರ ಅಭಿವೃದ್ಧಿ : ಶಶಿಕಲಾ ಜೊಲ್ಲೆ.

76
firstsuddi

ಬೆಂಗಳೂರು : ಪ್ರಧಾನಿ ಮೋದಿಯವರು ಕಾಶಿಯನ್ನು ಅಭಿವೃದ್ಧಿಗೊಳಿಸಿದಂತೆ ರಾಜ್ಯದ ಎ ಗ್ರೇಡ್ ನ 25 ದೇವಸ್ಥಾನಗಳನ್ನು ದೈವ ಸಂಕಲ್ಪ ಯೋಜನೆ ಹೆಸರಿನಲ್ಲಿ ಅಭಿವೃದ್ಧಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 25 ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ, ರಸ್ತೆ, ಕುಡಿಯುವ ನೀರು, ಸ್ನಾನಘಟ್ಟ, ಉತ್ತಮ ಶೌಚಾಲಯದ ವ್ಯವಸ್ಥೆ ಮಾಡಲು ತೀರ್ಮಾನ ಮಾಡಲಾಗಿದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಅಭಿವೃದ್ಧಿಗೊಳಿಸುವುದು ನನ್ನ ಮಹತ್ವದ ಕನಸಾಗಿದ್ದು, ಈ ಯೋಜನೆಯ ಮೊದಲ ಹಂತದ ಅಂದಾಜು ವೆಚ್ಚ 1,140 ಕೋಟಿ ರೂಪಾಯಿಗಳಾಗಿವೆ ಎಂದು ಹೇಳಿದರು.

ರಾಜ್ಯದಲ್ಲಿ 34,217ಸಿ ದರ್ಜೆಯ ದೇವಸ್ಥಾನಗಳು ಇವೆ. ಪ್ರತಿವರ್ಷ ಇವುಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಅನುದಾನ ನೀಡಲಾಗುತ್ತಿದೆ. ಆದರೂ, ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಪ್ರತಿವರ್ಷ 1000ಸಿ ದರ್ಜೆಯ ದೇವಸ್ಥಾನಗಳನ್ನು ಸಮಗ್ರ ಅಭಿವೃದ್ಧಿಗೊಳಿಸಲು ಕ್ರಮಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ಈ ಬಾರಿಯ ಆಯವ್ಯಯದಲ್ಲಿ 119 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ದೇವಾಲಯಗಳ ಅಭಿವೃದ್ಧಿಗೆ 168 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ನೀಡಿದ್ದು, ಒಟ್ಟಾರೆಯಾಗಿ ಪ್ರಸಕ್ತ ವರ್ಷ ಇದುವರೆಗೂ 287 ಕೋಟಿ ಅನುದಾನ ನೀಡಲಾಗಿದೆ. ಬಿಜೆಪಿ ಸರ್ಕಾರ ನಾಲ್ಕು ಪಟ್ಟು ಹೆಚ್ಚು ಅನುದಾನ ನೀಡಿರುವ ಹಿನ್ನಲೆಯಲ್ಲಿ ಮುಜರಾಯಿ ಖಾತೆ ಸಚಿವೆಯಾಗಿ ನಾನು ಮುಖ್ಯಮಂತ್ರಿಗಳಿಗೆ ವಿಶೇಷವಾದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ದೇವಸ್ಥಾನಕ್ಕೆ ಸ್ವಾಯತ್ತತೆ ನೀಡುವ ವಿಚಾರ ಸಂಬಂಧ ಮಾತನಾಡಿದ ಸಚಿವರು, ಖಾಸಗೀಕರಣ ಇದರಲ್ಲಿ ಇಲ್ಲ. ಅದು ತಪ್ಪು ಕಲ್ಪನೆ. ಸ್ವಾಯತ್ತತೆ ನೀಡಿ, ಸಮಗ್ರ ಅಭಿವೃದ್ಧಿ ನೀಡಬೇಕು. ಹಾಗಾಗಿ, ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ. ಭಕ್ತರಿಗೆ ಅನುಕೂಲ ಮಾಡಿ ಕೊಡಲು ಈ ಯೋಜನೆ. ಈ ಸಂಬಂಧ ಧಾರ್ಮಿಕ ಪ್ರಮುಖರ ಜೊತೆ ಚರ್ಚೆ ನಡೆಯುತ್ತಿದೆ ಎಂದರು.

ರಾಜ್ಯ ಸರ್ಕಾರದ ವತಿಯಿಂದ ರಾಜ್ಯದಲ್ಲಿರುವ ಸಿ ದರ್ಜೆಯ ದೇವಸ್ಥಾನಗಳಿಗೆ ವಾರ್ಷಿಕವಾಗಿ 48 ಸಾವಿರ ರೂಪಾಯಿಗಳ ತಸ್ತಿಕ್ ಹಣವನ್ನು ನೀಡಲಾಗುತ್ತಿದೆ. ಇಂದಿನ ದಿನಮಾನದಲ್ಲಿ ಈ ಹಣ ಸಾಕಾಗುವುದಿಲ್ಲ ಎನ್ನುವುದು ನಮ್ಮ ಗಮನಕ್ಕೆ ಬಂದಿದ್ದು, ತಸ್ತಿಕ್ ಹಣವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಅನುಮೋದನೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ರಾಜ್ಯದಿಂದ ಬಹುಸಂಖ್ಯೆಯಲ್ಲಿ ಭಕ್ತರು ತೆರಳುವ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಮುಜರಾಯಿ ಇಲಾಖೆ ಒಡೆತನದಲ್ಲಿರುವ ಭೂಮಿಯಲ್ಲಿ ಕರ್ನಾಟಕ ಛತ್ರ ನಿರ್ಮಿಸಲು 85 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. 45 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿಗಳ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.

ಚಾರ್ ಧಾಮ್ ಯಾತ್ರೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಶಿ ಯಾತ್ರೆ ಮಾಡುವವರಿಗೆ ಪ್ರೋತ್ಸಾಹ ಧನ ಹಾಗೂ 12 ಜ್ಯೋತಿರ್ಲಿಂಗ ದರ್ಶನ ಮಾಡುವವರಿಗೆ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ ಎಂದರು.

ಅಯೋಧ್ಯೆಯಲ್ಲಿ ಭೂಮಿ ಕೇಳುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪತ್ರ ವ್ಯವಹಾರ ನಡೆದಿದೆ. ಪ್ರತಿಯೊಂದು ಕಡೆಯ ಯಾತ್ರಿ ನಿವಾಸ ಆಗಬೇಕೆಂದು ಚಿಂತನೆ ನಡೆದಿದೆ. ನಾನೂ ಅಲ್ಲಿಗೆ ಹೋಗಬೇಕಿತ್ತು. ಅಧಿವೇಶನ ಮುಗಿದ ನಂತರ ಅಯೋಧ್ಯೆಗೆ ಭೇಟಿ ಕೊಡುವುದಾಗಿ ಹೇಳಿದರು.