ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ರಾಜ್ಯದ ಕೆಲ ಬೇಡಿಕೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಿದರು. ಅಲ್ಪಾವಧಿ ಬೆಳೆ ಸಾಲ ವಿತರಣೆಗೆ ಸಾಧ್ಯವಾಗುವಂತೆ ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ಒದಗಿಸಿರುವ ನಬಾರ್ಡ್ ನೆರವು ಕಡಿತಗೊಳಿಸಿರುವುದರಿಂದ ರಾಜ್ಯದ ರೈತಾಪಿ ವರ್ಗ ಸಂಕಷ್ಟಕ್ಕೆ ಈಡಾಗಿದೆ. 2023 -24ರ ಸಾಲಿನಲ್ಲಿ 5,600 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿತ್ತು. 2024-25ರ ಸಾಲಿನಲ್ಲಿ 2,340 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಇದರಿಂದಾಗಿ ನಬಾರ್ಡ್ ನೆರವು ಪ್ರಸಕ್ತ ಸಾಲಿನಲ್ಲಿ ಶೇ.58 ರಷ್ಟು ಕಡಿತವಾಗಿದೆ ಎಂದು ತಿಳಿಸಿದರು. ರಾಜ್ಯವು ಹೆಚ್ಚುವರಿ ಬಡ್ಡಿ ಸಹಾಯಧನವನ್ನು ನೀಡದ ಹೊರತು, ಇದು ರಾಜ್ಯದ ರೈತಾಪಿ ವರ್ಗದ ಆರ್ಥಿಕ ವೆಚ್ಚದ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೇ, ರಾಜ್ಯದ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಲಿದೆ. ಆದ್ದರಿಂದ ಈ ಕೂಡಲೇ ಇದನ್ನು ಪರಾಮರ್ಶಿಸಿ ನಬಾರ್ಡ್ ನೆರವು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ರಾಜ್ಯದ ರೈತರು ಅಲ್ಪಾವಧಿ ಬೆಳೆ ಸಾಲಗಳನ್ನು ಪಡೆಯಲು ಯಾವುದೇ ರೀತಿಯ ತೊಂದರೆಯಾಗದಂತೆ ತಾವು ಹಣಕಾಸು ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಸಿಎಂ ಮನವಿ ಮಾಡಿದರು. ಭದ್ರಾ ಮೇಲ್ದಂಡೆ ಯೋಜನೆ: ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 2023-24ರ ಕೇಂದ್ರ ಬಜೆಟ್‍ನಲ್ಲಿ ಅನುಮೋದನೆಯಾಗಿರುವ 5,300 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಕೇಂದ್ರ ಹಣಕಾಸು ಸಚಿವರ ಭರವಸೆ ಈವರೆಗೆ ಈಡೇರಿಲ್ಲ. ತ್ವರಿತ ನೀರಾವರಿ ಲಾಭ ಕಾರ್ಯಕ್ರಮದಡಿ ನೆರವು ಒದಗಿಸಲು ಸಚಿವ ಸಂಪುಟದ ಟಿಪ್ಪಣಿಯನ್ನು ಸಿದ್ದಮಾಡಿರುವ ಬಗ್ಗೆ ತಿಳಿದು ಬಂದಿದೆ. ಪ್ರಸಕ್ತ ಯೋಜನೆ ಶೀಘ್ರ ಅನುಮೋದನೆಗೊಂಡಲ್ಲಿ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಒಳಪಡುವ ಮಧ್ಯ ಕರ್ನಾಟಕದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ. ಆದ್ದರಿಂದ ಈ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವಂತೆ ಕೋರಿದರು.