ಬೆಂಗಳೂರು : ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಜನೋತ್ಸವ ಸಮಾವೇಶ ಕಾರ್ಯಕ್ರಮವನ್ನು ಎಲ್ಲರ ಜೊತೆ ಚರ್ಚಿಸಿ ರದ್ದುಗೊಳಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದ ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೋಮು ಭಾವನೆ ಕದಡುವ ಶಕ್ತಿಗಳನ್ನು ಸದೆಬಡಿಯುತ್ತೇವೆ. ಎಲ್ಲರೂ ಸಂಯಮದಿಂದ ವರ್ತಿಸಬೇಕು ಅಂತ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಯೋಗಿ ಮಾದರಿಯಲ್ಲಿ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಉತ್ತರ ಪ್ರದೇಶ ಪರಿಸ್ಥಿತಿ ಬೇರೆ ಕರ್ನಾಟಕ ಪರಿಸ್ಥಿತಿ ಬೇರೆ. ನಾವು ಕೇವಲ ಮಾತನಾಡುವುದಿಲ್ಲ. ಕ್ರಮ ಜರುಗಿಸಿ ತೋರಿಸುತ್ತೇವೆ. ಕರ್ನಾಟಕದಲ್ಲಿ ಎಲ್ಲವನ್ನೂ ಪ್ರಯೋಗ ಮಾಡುತ್ತಿದ್ದು, ಪ್ರಸಂಗ ಬಂದರೆ ರಾಜ್ಯದಲ್ಲೂ ಯೋಗಿ ಮಾಡೆಲ್ ಜಾರಿ ಮಾಡುತ್ತೇವೆ ಎಂದು ಸಿಎಂ ಹೇಳಿದರು.
ಪಿಎಫ್ ಐನಂತಹ ಸಂಘಟನೆಗಳು ಬ್ಯಾನ್ ಆಗುತ್ತಾ ಎಂಬ ಪ್ರಶ್ನೆಗೆ, ರಾಜ್ಯ ಸರ್ಕಾರಗಳು ಈ ಸಂಘಟನೆಗಳನ್ನು ಬ್ಯಾನ್ ಮಾಡುವ ಪ್ರಯತ್ನ ಮಾಡಿವೆ. ಆದರೆ ಕೋರ್ಟಿನಲ್ಲಿ ಹಿನ್ನಡೆಯಾಗಿದೆ. ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕು. ಆದಷ್ಟು ಬೇಗ ಕೇಂದ್ರದಿಂದ ಆ ನಿರ್ಧಾರ ಪ್ರಕಟವಾಗುವ ನಿರೀಕ್ಷೆ ಇದೆ ಎಂದರು.
ನಮ್ಮ ಸಚಿವ ಸಂಪುಟದಲ್ಲಿ ಅತ್ಯಂತ ದಕ್ಷ ಆಡಳಿತಗಾರ ಇದ್ದಾರೆ. ಸೇವಾ ಮನೋಭಾವ ಚೈತನ್ಯ ಇರುವ ಯುವಕರು ಬದ್ದತೆ ಇರುವ ಸಂಪುಟ ನಮ್ಮದು. ಇವರೆಲ್ಲರ ಪಾಲು ನಮ್ಮ ಸರ್ಕಾರದ ಸಾಧನೆಯಲ್ಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಸ್ವಲ್ಪ ನಿಯಂತ್ರಣಕ್ಕೆ ಬಂದ ಮೇಲೆ ನಾನು ಅಧಿಕಾರ ವಹಿಸಿಕೊಂಡೆ. ಯಡಿಯೂರಪ್ಪ ಸಮರ್ಥವಾಗಿ ಕೋವಿಡ್ ನಿರ್ವಹಿಸಿದ್ದರು. ಯಾರು ಯಾರು ಆಯಾ ಕ್ಷೇತ್ರದಲ್ಲಿ ಪರಿಣತರೋ ಎಲ್ಲ ಅಧಿಕಾರಿಗಳು ಸಚಿವರು ಸಹಕಾರ ನೀಡಿದರು. ಆಡಳಿತ ಯಾರ ಪರವಾಗಿ ಇದೆ ಎನ್ನೋದು ಬಹಳ ಮುಖ್ಯ. ರಾಜ್ಯದ ಸಮಗ್ರ ಅಭಿವೃದ್ಧಿ ಆಡಳಿತ ನಾವು ನೀಡಿದ್ದೇವೆ ಎಂದು ಹೇಳಿದರು.
10 ಲಕ್ಷ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಯೋಜನೆ ತಲುಪಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಯನ್ನೂ ಹೆಚ್ಚಿಗೆ ಮಾಡಿದ್ದೇವೆ. ಎಸ್ಸಿ-ಎಸ್ಟಿ ಸಮುದಾಯಕ್ಕೂ ಕೆಲ ನಿರ್ಣಯ ಮಾಡಿದ್ದೇವೆ. ಎಸ್ಸಿ-ಎಸ್ಟಿ, ಒಬಿಸಿ ಸಮುದಾಯಗಳಿಗೆ 800 ಕೋಟಿ ರೂ. ಹೆಚ್ಚುವರಿ ಹಣ ಕೊಟ್ಟಿದ್ದಲ್ಲದೆ ಅವರಿಗೆ 75 ಯುನಿಟ್ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ ಎಂದು ಸಿಎಂ ತಿಳಿಸಿದರು.










