ಚಿಕ್ಕಮಗಳೂರು: ಪ್ರಸ್ತುತ ಪ್ರಪಂಚ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ ಜನಸಂಖ್ಯೆಯ ಹೆಚ್ಚಳ ಎಂದು ಐಡಿಎಸ್‍ಜಿ ಕಾಲೇಜಿನ ಪ್ರಾದ್ಯಾಪಕ ಸತೀಶ್ ಹೇಳಿದರು.
ನಗರದ ಕುವೆಂಪು ವಿದ್ಯಾನಿಕೇತ ಶಾಲೆಯಲ್ಲಿ ನಿನ್ನೆ ಏರ್ಪಡಿಸಿದ್ದ ವಿಶ್ವಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಸಂಖ್ಯೆಯ ಹೆಚ್ಚಳದಿಂದ ಸಂಪನ್ಮೂಲಗಳ ಕೊರತೆ, ಬಡತನ, ನಿರುದ್ಯೋಗ, ಪರಿಸರ ನಾಶ, ಅಪರಾಧ ಪ್ರಕರಣಗಳ ಹೆಚ್ಚಳ, ಅಪೌಷ್ಠಿಕತೆ ಎದುರಾಗುತ್ತವೆ ಎಂದ ಅವರು, ಈ ಕುರಿತು ಯುವಜನತೆಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.
ವಿದ್ಯಾವಂತರು ಮತ್ತು ಆರೋಗ್ಯವಂತರ ಸಂಖ್ಯೆ ಹೆಚ್ಚಾದಲ್ಲಿ ಅದು ದೇಶದ ಸಂಪತ್ತಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ಕೆ.ಸಿ. ಶಂಕರ್, ಜನಸಂಖ್ಯೆ ಹೆಚ್ಚಳ ಜಾಗತಿಕ ಸಮಸ್ಯೆಯಾಗಿದೆ. ಎಲ್ಲಾ ರಾಷ್ಟ್ರಗಳೂ ಒಗ್ಗೂಡಿ ವಿವೇಚನೆಯಿಂದ ಜನಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ಹಾಕಿದರೆ ಮಾತ್ರ, ಜಗತ್ತಿನಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಂಮೃದ್ದಿ ನೆಲೆಸುತ್ತದೆ ಎಂದು ಹೇಳಿದರು.
ಜನಸಂಖ್ಯಾ ಸ್ಫೋಟದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಶಾಲೆಯ ಪ್ರಾಂಶುಪಾಲ ರಾಘವೇಂದ್ರ, ಶ್ರಾವ್ಯ, ಶ್ರಿನಿಕ ಉಪಸ್ಥಿತರಿದ್ದರು.










