ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪ್ರೇಮಿಗಳು ಅರೆಸ್ಟ್…

54
firstsuddi

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪ್ರೇಮಿಗಳನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ನಂದಿನಿಬಾಯಿ ಮತ್ತು ನಿತೀಶ್ ಕುಮಾರ್ ಬಂಧಿತ ಆರೋಪಿಗಳು. ವೆಂಕಟ್ ನಾಯಕ್(30) ಕೊಲೆಯಾದ ವ್ಯಕ್ತಿ. ಇದೇ ತಿಂಗಳ 09ರಂದು ಹೆಚ್ಎಸ್ಆರ್ ಲೇಔಟ್‌ನ ಮನೆಯಲ್ಲಿ ಆರೋಪಿ ನಂದಿನಿಬಾಯಿ ತನ್ನ ಪ್ರಿಯಕರ ನಿತೀಶ್ ಕುಮಾರ್ ಜೊತೆ ಸೇರಿ ತನ್ನ ಪತಿ ವೆಂಕಟ್ ನಾಯಕ್ ತಲೆ ಮೇಲೆ ರುಬ್ಬುವ ಗುಂಡು ಹಾಕಿ ಕೊಲೆ ಮಾಡಿದ್ದರು. ಸದ್ಯ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

ಹೆಚ್ಎಸ್ಆರ್ ಲೇಔಟ್‌ನ ನಿವಾಸಿ ಅಗಿರುವ ಆರೋಪಿ ನಂದಿನಿ ಬಾಯಿ ಇದೇ ಜನವರಿ 9ರಂದು ಶಬರಿ ಮಲೆಯಿಂದ ಬಂದಿದ್ದ ಪ್ರಿಯಕರನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಪತಿ ಇಲ್ಲದ್ದನ್ನು ಗಮನಿಸಿ ಪ್ರಿಯಕರನೊಂದಿಗೆ ಸರಸ ಸಲ್ಲಾಪದಲ್ಲಿ ಮಗ್ನಳಾಗಿದ್ದಳು. ಆದ್ರೆ ಅದೇ ಸಮಯಕ್ಕೆ ಪತಿ ವೆಂಕಟನಾಯ್ಕ್ ಎಂಟ್ರಿ ಕೊಟ್ಟಿದ್ದಾನೆ. ಪತಿಯ ದಿಢೀರ್ ಆಗಮನದಿಂದ ಕಂಗಾಲಾದ ನಂದಿನಿ ಪ್ರಿಯಕರನೊಂದಿಗೆ ಸೇರಿ ತಕ್ಷಣವೇ ಸ್ಕೆಚ್ ಹಾಕಿ ಕೊಲೆ ಮಾಡಿಸಿದ್ದಾಳೆ. ಪೊಲೀಸರಿಗೆ ಕೊಲೆ ಎಂದು ಗೊತ್ತಾಗದಂತೆ ಬಾತ್ ರೂಂನಿಂದ ಬಿದ್ದು ಸಾವನ್ನಪ್ಪಿದ್ದಾನೆ ಅನ್ನೋ ರೀತಿಯಲ್ಲಿ ಸೀನ್ ಕ್ರಿಯೇಟ್ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿದಾಗ ಕೊಲೆ ಎಂಬುದು ಬಯಲಾಗಿದೆ. ಪೊಲೀಸರಿಗೂ ಸ್ಥಳ ಪರಿಶೀಲನೆ ವೇಳೆ ಕೊಲೆ ಎಂಬುದಾಗಿ ಅನುಮಾನ ಬಂದಿತ್ತು. ಪೊಲೀಸರಿಗೆ ನಂದಿನಿ ಮೇಲೆ ಅನುಮಾನ ವ್ಯಕ್ತವಾಗಿ ನಿಗಾ ಇಟ್ಟಿದ್ದರು. ಮರಣೋತ್ತರ ವರದಿ ಬಂದ ಬಳಿಕ ನಂದಿನಿಯನ್ನ ವಿಚಾರಿಸಿದಾಗ ಅಲ್ಲಿಯೂ ನನ್ನ ಗಂಡನ ಸಾವಿನಿಂದ ನಾನು ಹುಚ್ಚಿಯಾಗಿದ್ದೀನಿ. ನನಗೆ ನನ್ನ ಗಂಡ ಬೇಕು ಎಂದು ಒಂದೇ ಸಮನೇ ಪೊಲೀಸರ ಮುಂದೆ ಹೈಡ್ರಾಮಾ ಮಾಡಿದ್ದಾಳೆ. ನಂತರ ಪೊಲೀಸರು ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಪ್ರಿಯಕರ ನಿತೀಶ್ ಕುಮಾರ್ ಜೊತೆ ಸೇರಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ಸದ್ಯ ಆರೋಪಿ ನಿತೀಶ್ ಕುಮಾರ್‌ನನ್ನ ಬಂಧಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ನಿತೀಶ್ ಹಾಗೂ ನಂದಿನಿ ಇಬ್ಬರೂ ಆಂಧ್ರಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.