ಹಾಸನ : ಪ್ರೀತಿಸುವ ನಾಟಕ ಮಾಡಿ ಯುವತಿಯರಿಗೆ ವಂಚಿಸುತ್ತಿದ್ದ ಖತರ್ನಾಕ್ ಪ್ರೇಮಿಯನ್ನ ಸಕಲೇಶಪುರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಶರತ್ ಬಂಧಿತ ವಿಕೃತ ಪ್ರೇಮಿ. ಈತ ಮೂಲತಃ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ನಿವಾಸಿ. ಶರತ್, ಸೋಷಿಯಲ್ ಮೀಡಿಯಾದಲ್ಲಿ ಕಾಣುವ ಸುಂದರ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಮೊದಲಿಗೆ ಪರಿಚಯವಾಗಿ ಯುವತಿಯರ ನಂಬರ್ ಪಡೆದು ಬಳಿಕ ಪ್ರೀತಿಯ ನಾಟಕ ಮಾಡಿ ಯುವತಿಯರನ್ನು ಬಲೆಗೆ ಕೆಡುವುತ್ತಿದ್ದ.
ದೌರ್ಜನ್ಯಕ್ಕೊಳಗಾದ ಯುವತಿಯೊಬ್ಬಳು, ಶರತ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮೂರು ವರ್ಷದಿಂದ ಯುವತಿಯನ್ನು ಪ್ರೀತಿಸುವ ನಾಟಕವಾಡಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಶರತ್, ಆಕೆಯಿಂದ ಹಣ ಹಾಗೂ ಒಡವೆಗಳನ್ನು ಪಡೆದಿದ್ದ. ಅಲ್ಲದೇ ಆಕೆಯೊಂದಿಗೆ ಸಂಪರ್ಕದಲ್ಲಿರುವಾಗಲೇ ಶಿವಮೊಗ್ಗ ಮೂಲದ ಮತ್ತೋರ್ವ ಯುವತಿ ಜೊತೆ ಓಡಾಟ ಆರಂಭಿಸಿದ್ದ. ಆಕೆಯೊಂದಿಗೂ ಪ್ರೀತಿಯ ನಾಟಕವಾಡಿದ್ದಾನೆ.
ಬೇರೆ ಯುವತಿಯ ಜೊತೆಗಿನ ಸಂಬಂಧ ತಿಳಿಯುತ್ತಿದ್ದಂತೆ ಅನುಮಾನಗೊಂಡ ಯುವತಿ ಶರತ್‍ನನ್ನು ಪ್ರಶ್ನಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಶರತ್, ಪ್ರೇಯಸಿಗೆ ಮನಬಂದಂತೆ ಥಳಿಸಿದ್ದಾನೆ. ಹಲ್ಲೆ ನಡೆಸುವಾಗಲೇ ವೀಡಿಯೋ ಕಾಲ್ ಮಾಡಿ ಹೊಸ ಗೆಳತಿಗೂ ತೋರಿಸಿದ್ದಾನೆ. ಆಕೆ ವೀಡಿಯೋ ಕಾಲ್ ಅನ್ನು ರೆಕಾರ್ಡ್ ಮಾಡಿಕೊಂಡಿದ್ದು, ವೀಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೇ ಆತ ತನ್ನ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದು, ಹಣ ಒಡವೆ ಪಡೆದಿದ್ದಾನೆ ಎಂದು ಆರೋಪಿಸಿದ್ದಾಳೆ. ಇದೀಗ ಯುವತಿಗೆ ಚಿತ್ರಹಿಂಸೆ ನೀಡುತ್ತಿರುವ ವೀಡಿಯೋ ವೈರಲ್ ಆಗಿದೆ.
ಈ ಸಂಬಂಧ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










