ಬದಲಾದ ಶಿಕ್ಷಣ ಪದ್ದತಿ ಹಾಗೂ ಶಿಕ್ಷೆಯ ಪಾತ್ರ…

687
firstsuddi

  • ರಾಘವೇಂದ್ರ ಕೆಸವಳಲು

“Spare the rod and Spoil the child”. ಇದು ಮಕ್ಕಳನ್ನು ಅವರು ತಪ್ಪಿದಾಗ ಶಿಕ್ಷಿಸದಿದ್ದರೆ ತಪ್ಪುದಾರಿ ತುಳಿಯುತ್ತಾರೆ ಎಂಬರ್ಥದ ಹಳೆಯ ನಾಣ್ಣುಡಿ. ಆದರೆ ಬದಲಾದ ಶಿಕ್ಷಣ ವ್ಯವಸ್ಥೆ ಹಾಗೂ ಸಾಮಾಜಿಕ ಚೌಕಟ್ಟಿನಲ್ಲಿ ಇದೇ ನಾಣ್ಣುಡಿ “Spare the rod or end up in jail” ಎಂದು ಬದಲಾಗಿದೆ. ಬಹುಷಃ ಇದು ಇಂದಿನ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೂ ಎಚ್ಚರಿಕೆಯ ಕರೆ ಗಂಟೆ. ಶಾಲೆಗಳಲ್ಲಿ ಮಕ್ಕಳು ತಪ್ಪು ಮಾಡಿದಾಗ ಶಿಕ್ಷಕರು ನೀಡುವ ದೈಹಿಕ ಹಾಗೂ ಮಾನಸಿಕ ಶಿಕ್ಷೆಯನ್ನು “Corporal Punishment” Act ಅಡಿಯಲ್ಲಿ ಶಿಕ್ಷಾರ್ಹ ಗಂಭೀರ ಅಪರಾಧ ಎಂದು ಪರಿಗಣಿಸಲಾಗಿದೆ. ಅಪರಾಧವು ಸಾಬೀತಾದಲ್ಲಿ ಶಿಕ್ಷಕರು ನಿಗದಿತ ದಂಡ ಪಾವತಿಯೊಂದಿಗೆ ಜೈಲು ವಾಸವನ್ನೂ ಅನುಭವಿಸಬೇಕಾಗುತ್ತದೆ.

ಇದೇನೇ ಇರಲಿ ಶಿಸ್ತುಬದ್ಧ ಅಭ್ಯಾಸಗಳು ಮಕ್ಕಳಲ್ಲಿ ಮೈಗೂಡಲು ನಿಯಮಿತ ಪ್ರಮಾಣದ ಶಿಕ್ಷೆ ಹಾಗೂ ಕಟ್ಟಳೆಗಳು ಅತ್ಯಗತ್ಯ. ಹಿಂದೆ ಕಷ್ಟಗಳಿಗೆ ಮೈಯೊಡ್ಡಿ ತಪಸ್ಸಿನಂತೆ ತಮ್ಮದಾಗಿಸಿಕೊಳ್ಳುತ್ತಿದ್ದ ಶಿಕ್ಷಣ ಇಂದು ಎಲ್ಲರ ಮೂಲಭೂತ ಹಕ್ಕಾಗಿರುವುದು ಒಂದು ಉತ್ತಮ ಬೆಳವಣಿಗೆ ಆದರೆ, ಪರಿಶ್ರಮವಿಲ್ಲದೆ ದೊರಕುವ ಫಲದ ಬೆಲೆ ಇಂದಿನ ಪೀಳಿಗೆ ಮಕ್ಕಳಿಗೆ ಅರಿವಾಗುತ್ತಿಲ್ಲ. ಹಿಂದೆಲ್ಲಾ ಗುರುಹಿರಿಯರಲ್ಲಿ ಭಯ ಭಕ್ತಿಯನ್ನು ಹೊಂದಿದ್ದ ಮಕ್ಕಳು ಇಂದು ತಮ್ಮಿಂದಾದ ತಪ್ಪುಗಳನ್ನು ಸರಿಪಡಿಸಲು ಶಿಕ್ಷಕರು ಅಥವಾ ಪೋಷಕರು ನೀಡುವ ಶಿಕ್ಷೆಯ ಪ್ರಮಾಣದಿಂದ ದಿನೇ ದಿನೇ ದೂರಾಗುತ್ತಿದ್ದಾರೆ. ಇದರ ಮೂಲಕ ಅವರು ಅಳವಡಿಸಿಕೊಳ್ಳಬೇಕಾದ ಮೌಲ್ಯಗಳು ಕೂಡಾ.
ಶಾಲೆಯಲ್ಲೇ ಆಗಲಿ ಅಥವಾ ಮನೆಯಲ್ಲೇ ಆಗಲಿ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಲು ಶಿಸ್ತುಬದ್ಧವಾದ ವಾತಾವರಣ ಅಗತ್ಯವಿರುತ್ತದೆ. ಪ್ರೀತಿಯೊಂದಿಗೆ ಸ್ವಲ್ಪ ಮಟ್ಟಿನ ನಿರ್ಧಯತೆ ಪೋಷಕರು ಹಾಗೂ ಶಿಕ್ಷಕರಲ್ಲಿ ಇದ್ದಾಗ ಮಾತ್ರ ಮಕ್ಕಳು ಸಕಾಲಕ್ಕೆ ಸರಿಯಾದ ದಾರಿಯಲ್ಲಿ ನಡೆದು ಸತ್ಪ್ರಜೆಗಳಾಗಲು ಸಾಧ್ಯ.

ಅದೇ ರೀತಿ ಹಿಂದಿನಂತೆ ಇಂದಿನ ಮಕ್ಕಳಲ್ಲಿ ಶಿಕ್ಷಕರು ಗದರಿದರೆ ಸಾಕು ಮರುದಿನ ಪೋಷಕರೊಂದಿಗೆ ಶಾಲೆಗೆ ಬರುತ್ತಾರೆ ಹಾಗೂ ಶಾಲಾ ಮುಖ್ಯಸ್ಥರಿಗೆ ದೂರು ನೀಡುತ್ತಾರೆ ಎಂದು ಶಿಕ್ಷಕರು ಕೂಡಾ ಕೈಚೆಲ್ಲಿ ಕೂರದೆ, ಸಮಚಿತ್ತದಿಂದ ಮಕ್ಕಳಾಗುತ್ತಿರುವ ಬದಲಾವಣೆಗಳಿಗೆ ಕಾರಣಗಳೇನು, ಹಾಗೂ ಅವರ ಆತ್ಮಾಭಿಮಾನಕ್ಕೆ ಧಕ್ಕೆಯಾಗದಂತೆ ಅವರನ್ನು ಪ್ರೀತಿಯಿಂದ ಗದರಿ, ಅಲ್ಪ ಪ್ರಮಾಣದ ಶಿಕ್ಷೆಯೊಂದಿಗೆ ಅವರಲ್ಲಿ ಗುರುತರವಾದ ಬದಲಾವಣೆಯನ್ನು ತರುವ ಜವಾಬ್ದಾರಿಯನ್ನು ಹೊರಬೇಕಾಗಿದೆ. ಆಗ ಮಾತ್ರ ಇಂದಿನ ಮಕ್ಕಳು ರಾಷ್ಟ್ರಕವಿ ಕುವೆಂಪುರವರ ಮಾತಿನಂತೆ ಭತ್ತ ತುಂಬುವ ಚೀಲಗಳಾಗದೆ ಭತ್ತ ಬೆಳೆಯುವ ಗದ್ದೆಗಳಾಗಲು ಸಾದ್ಯ.