ಬಸ್​​ನಲ್ಲಿಯೇ ಗರ್ಭಿಣಿಗೆ ಹೆರಿಗೆ ಮಾಡಿಸಿದ ಮಹಿಳಾ ಕಂಡಕ್ಟರ್.

40
firstsuddi

ಹಾಸನ: ಮಹಿಳಾ ಕಂಡಕ್ಟರೊಬ್ಬರು ಬಸ್‌ನಲ್ಲಿಯೇ ಗರ್ಭಿಣಿಗೆ ಹೆರಿಗೆ ಮಾಡಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಡಿಪೋದ ಕೆಎ 18 ಎಫ್ 0865 ಕೆಎಸ್‌ಆರ್‌ಟಿಸಿ ಬಸ್ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿತ್ತು. ಮಹಿಳೆಗೆ ಬಸ್‌ನಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಬಸ್ ಅನ್ನು ನಿಲ್ಲಿಸಿ, ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿದರು. ನಂತರ ಗರ್ಭಿಣಿಗೆ ಹೆರಿಗೆ ಮಾಡಿಸಿದರು.

ಮಹಿಳೆ ಬಸ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಹಾಗೂ ಮಗುವನ್ನು ಶಾಂತಿಗ್ರಾಮದ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಬಸ್‌ನ ನಿರ್ವಾಹಕಿ ವಸಂತ ಹಾಗೂ ಪ್ರಯಾಣಿಕರು ಆಸ್ಪತ್ರೆಗೆ ತೆರಳಿ ಮಹಿಳೆಗೆ ಹಣದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಸರಿಯಾದ ಸಮಯದಲ್ಲಿ ಮಹಿಳೆಗೆ ಬಸ್‌ನಲ್ಲಿಯೇ ಹೆರಿಗೆ ಮಾಡಿಸಿ, ಆಸ್ಪತ್ರೆಗೆ ದಾಖಲಿಸಿ, ಆಕೆಗೆ ಹಣದ ಸಹಾಯ ಮಾಡಿರುವ ಬಸ್ ಚಾಲಕ, ನಿರ್ವಾಹಕಿ ಹಾಗೂ ಪ್ರಯಾಣಿಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.