ಬಾಲಬ್ರೂಯಿ ಗೆಸ್ಟ್ ಹೌಸ್‌ನಲ್ಲಿ ಕಾನ್ಸ್​ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣಕ್ಕೆ ಹೈಕೋರ್ಟ್ ಗ್ರೀನ್​ಸಿಗ್ನಲ್​…

50
firstsuddi

ಬೆಂಗಳೂರು : ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ಬಾಲಬ್ರೂಯಿ ಅತಿಥಿಗೃಹದಲ್ಲಿ ಕಾನ್ಸ್​ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣಕ್ಕೆ ಹೈಕೋರ್ಟ್ ಅನುಮತಿಸಿದೆ.

ಮೆಟ್ರೋ ಕಾಮಗಾರಿ ಸೇರಿದಂತೆ ನಗರದಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ ಮರಗಳನ್ನು ಕಡಿಯುತ್ತಿರುವುದನ್ನು ಪ್ರಶ್ನಿಸಿ ದತ್ತಾತ್ರೆಯ ದೇವರು ಎಂಬುವವರು ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ಪೀಠ ಬಾಲಬ್ರೂಯಿ ಕಟ್ಟಡಮತ್ತು ಪುರಾತನ ಮರಗಳಿಗೆ ಹಾನಿಯಾಗದಂತೆ ಕಾನ್ಸ್​ಸ್ಟಿಟ್ಯೂಷನ್ ಕ್ಲಬ್ ಸ್ಥಾಪನೆ ಮಾಡಬಹುದು ಎಂದು ಆದೇಶಿಸಿದೆ.

ಬಾಲಬ್ರೂಯಿ ಆವರಣದಲ್ಲಿ ಮರಗಳನ್ನು ಕಡಿಯುವುದಿಲ್ಲ. ಕಟ್ಟಡಕ್ಕೆ ಧಕ್ಕೆಯಾಗುವ ಕಾಮಗಾರಿ ನಡೆಸುವುದಿಲ್ಲ. ಗೆಸ್ಟ್ ಹೌಸ್‌ ನಿರ್ವಹಣೆಗೆ ಮಾತ್ರ ಕ್ರಮ ಕೈಗೊಳ್ಳಲಾಗುವುದು. ಗೆಸ್ಟ್ ಹೌಸ್‌ ಆವರಣದ 159 ಮರಗಳನ್ನು ಕಡಿಯುವುದಿಲ್ಲ. ಗೆಸ್ಟ್ ಹೌಸ್‌ ಅನ್ನು ಕಾನ್ಸ್​ಸ್ಟಿಟ್ಯೂಷನ್ ಕ್ಲಬ್ ಆಗಿ ಬಳಸಲಾಗುವುದು ಎಂದು ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ಭರವಸೆ ನೀಡಿದರು. ಸರ್ಕಾರದ ಹೇಳಿಕೆ ದಾಖಲಿಸಿಕೊಂಡು ಕಾನ್ಸ್​ಸ್ಟಿಟ್ಯೂಷನ್ ಕ್ಲಬ್ ಗೆ ಕೋರ್ಟ್ ಅನುಮತಿ ನೀಡಿದೆ. ಕಾನ್ಸ್​ಸ್ಟಿಟ್ಯೂಷನ್ ಕ್ಲಬ್ ನಲ್ಲಿ ಒಳ್ಳೆಯ ಲೈಬ್ರರಿ, ಉತ್ತಮ ಕಾಫಿ ಸಿಗುವಂತಿರಲಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸಿಜೆ ಪ್ರಸನ್ನ ಬಿ.ವರಾಳೆ ಸಲಹೆ ನೀಡಿದ್ದಾರೆ.

ಪಾರಂಪರಿಕ ಮೌಲ್ಯ ಹೊಂದಿರುವ ಬಾಲಬ್ರೂಯಿ ಕಟ್ಟಡದಲ್ಲಿ ಕಾನ್ಸ್​ಸ್ಟಿಟ್ಯೂಷನ್ ಕ್ಲಬ್ ನಿರ್ಮಿಸುವ ಸರ್ಕಾರದ ಪ್ರಸ್ತಾವಕ್ಕೆ ಈ ಹಿಂದೆ ಪರಿಸರವಾದಿಗಳು ಮತ್ತು ನಗರದ ಇತಿಹಾಸ ತಜ್ಞರಿಂದ ವಿರೋಧ ವ್ಯಕ್ತವಾಗಿತ್ತು. ‘ಬೆಂಗಳೂರಿನ ಪರಂಪರೆ ಸಾರುವ ಇಂಥ ತಾಣಗಳನ್ನು ಕಾಪಾಡಬೇಕು. ಒಮ್ಮೆ ಇಂಥ ಕಟ್ಟಡಗಳ ಮೂಲ ಸ್ವರೂಪ ನಾಶಪಡಿಸಿದರೆ ಮತ್ತೆ ರೂಪಿಸುವುದು ಅಸಾಧ್ಯ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದರು.