ನೋಯ್ಡಾ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಹತ್ಯೆಯಾದ ಎನ್‍ಸಿಪಿ ನಾಯಕ ಬಾಬಾ ಸಿದ್ದಿಕಿ ಪುತ್ರ ಜೀಶನ್ ಸಿದ್ದಿಕಿಗೆ ಕೊಲೆ ಬೆದರಿಕೆ ಕರೆ ಮಾಡಿದ್ದ ನೋಯ್ಡಾ ಮೂಲದ 20 ವರ್ಷದ ಯುವಕನನ್ನು ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ. ಕೊಲೆ ಬೆದರಿಕೆ ಹಾಕಿರುವ ಆರೋಪಿಯು ತಮಾಷೆಗಾಗಿ ಈ ಕರೆಯನ್ನು ಮಾಡಿರುವುದಾಗಿ ತಿಳಿಸಿದ್ದಾನೆ. ಶುಕ್ರವಾರ ರಾತ್ರಿ ಪರಿಚಿತ ವ್ಯಕ್ತಿಯೊಬ್ಬ ಜೀಶನ್ ಕಚೇರಿಯ ಲ್ಯಾಂಡ್ ಲೈನ್‍ಗೆ ಕರೆ ಮಾಡಿ, ಜೀಶನ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಅಲ್ಲದೇ, ಹಣಕ್ಕಾಗಿ ಕೂಡ ಈತ ಆಗ್ರಹಿಸಿದ್ದ. ಬಂಧಿತ ಆರೋಪಿ ದೆಹಲಿ ನಿವಾಸಿಯಾಗಿದ್ದು, ಯಾವುದೇ ಗ್ಯಾಂಗ್ ಜೊತೆ ಅಥವಾ ಮಾಫಿಯಾ ನಂಟು ಹೊಂದಿಲ್ಲ ಎಂದು ತಿಳಿದು ಬಂದಿದೆ. ಈ ನಡುವೆ ಈ ರೀತಿ ಕರೆ ಮಾಡುವ ಉದ್ದೇಶ ಏನಿತ್ತು ಎಂಬ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.










