ಬಾಗಲಕೋಟೆ : ಬಿಜೆಪಿಯಲ್ಲಿ ಒರಿಜಿನಲ್ ಪತಿವ್ರತೆಯರಿದ್ದಾರೆ ಈಗಾ ಸೀರುಡಿಕೆಯರಿಗೆ ಸಚಿವ ಸ್ಥಾನವನ್ನು ಕೊಟ್ಟರೆ ಹೇಗೆ? ಎಂದು ಎಂಎಲ್‍ಸಿ ಸಿ.ಎಂ ಇಬ್ರಾಹಿಂ ಅವರು ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ. ಪಾಪ ಅವರಷ್ಟು ನೋವು ಪಡುತ್ತಿರುವವರು ಯಾರು ಇಲ್ಲ. ಬಿಜೆಪಿಯಲ್ಲಿ ಒರಿಜಿನಲ್ ಪತಿವ್ರತೆಯರಿದ್ದಾರೆ. ಈಗಾ ಸೀರುಡಿಕೆಯರಿಗೆ ಸಚಿವ ಸ್ಥಾನವನ್ನು ಕೊಟ್ಟರೆ ಹೇಗೆ? ಒರಿಜಿನಲ್ ಪಟ್ಟದ ಮಹಿಷಿಯರು ಎಲ್ಲಿ ಹೋಗಬೇಕು. ಒಂದು ತೂತು ಮುಚ್ಚುವಷ್ಟರಲ್ಲಿ ಇನ್ನೊಂದು ತೂತು ಬೀಳುತ್ತಿದೆ ಎಂದು ಬಿಜೆಪಿ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನದ ಬಗ್ಗೆ ಲೇವಡಿ ಮಾಡಿದರು.
ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪ್ರತಿಕ್ರಯಿಸಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ಸಿ ಬಗ್ಗೆ ನಮಗೆ ಯಾವುದೇ ಭಯವಿಲ್ಲ. ಆದರೆ ನೋವಿದೆ. ಈ ಕುರಿತು ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪತ್ರ ಬರೆದಿದ್ದೆ. ಆದರೆ ನನ್ನ ಪತ್ರಕ್ಕೆ ಮೋದಿ ಅವರು ಇನ್ನು ಉತ್ತರಿಸಿಲ್ಲ. ಪಾಪ ಅಡ್ವಾಣಿ ಅವರಿಗೇ ಸರಿಯಾಗಿ ಉತ್ತರಿಸುವುದಿಲ್ಲ. ಇನ್ನು ನಮ್ಮ ಪ್ರಶ್ನೆಗೆ ಎಲ್ಲಿ ಉತ್ತರಿಸುತ್ತಾರೆ ಎಂದರು.










