ಬಿಪಿನ್ ರಾವತ್ ಬಗ್ಗೆ ಅವಹೇಳನಕಾರಿ ಪೋಸ್ಟ್ : ಮಂಗಳೂರಿನಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲು…

69
firstsuddi

ಮಂಗಳೂರು : ಹೆಲಿಕಾಪ್ಟಾರ್ ದುರಂತದಲ್ಲಿ ಮಡಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಮೂವರ ವಿರುದ್ದ ನಗರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜನರಲ್ ಬಿಪಿನ್ ರಾವತ್ ಅವರ ಮೇಲೆ ದ್ವೇಷದ ಸಂದೇಶಗಳನ್ನು ಪೋಸ್ಟ್ ಮಾಡಿದವರ ವಿರುದ್ಧ ನಾವು ಪ್ರಕರಣಗಳನ್ನು ದಾಖಲಿಸಿದ್ದೇವೆ. ಆ ಖಾತೆಗಳನ್ನು ಅಸಲಿಯೋ ನಕಲಿಯೋ ಎಂದು ಹುಡುಕುವ ಪ್ರಕ್ರಿಯೆಯಲ್ಲಿದ್ದೇವೆ. ಫೇಸ್‌ಬುಕ್ ಖಾತೆದಾರರಲ್ಲಿ ಒಬ್ಬರು ಕಾರ್ಕಳದವರು, ಇನ್ನೊಬ್ಬರು ಬೆಂಗಳೂರಿನವರು ಮತ್ತು ಇನ್ನೊಬ್ಬರು ಅಪರಿಚಿತರಾಗಿದ್ದು ಈ ಕಾರಣ ನಾವು ತಜ್ಞರ ಸಲಹೆಯನ್ನು ತೆಗೆದುಕೊಳ್ಳುತ್ತೇವೆ. ಇವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಆರೋಪಿಗಳ ಪತ್ತೆ ಹಚ್ಚಲಾಗುವುದು, ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.

ತಮಿಳುನಾಡಿನ ಕೂನೂರ್ ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್, ಪತ್ನಿ ಮತ್ತು ಇತರ 11 ಮಂದಿ ಸಾವನ್ನಪ್ಪಿದ್ದ ವಿಚಾರವನ್ನು ಕೆಲವರು ಅಪಹಾಸ್ಯ ಮಾಡಿ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಂಚಿಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶ ಉಂಟಾಗಿತ್ತು.