ಬಿಲ್ಕಿಸ್ ಬಾನು ಪ್ರಕರಣ : ಅಪರಾಧಿಗಳ ಬಿಡುಗಡೆ ಕ್ರಮವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಒತ್ತಾಯ…

81
firstsuddi

ಚಿಕ್ಕಮಗಳೂರು : ಗುಜರಾತ್ ನ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆಗೊಳಿಸಿರುವ ಕ್ರಮವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಬಹುಜನ ಸಮಾಜ ಪಕ್ಷ ರಾಷ್ಟ್ರಪತಿಗಳನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಇಂದು ಭೇಟಿ ಮಾಡಿ ಮನವಿ ಸಲ್ಲಿಸಿದ ಪಕ್ಷದ ಪದಾಧಿಕಾರಿಗಳು ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವುದರ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗುಜರಾತ್‍ನ ಹತ್ಯಾಕಾಂಡದ ಸಂದರ್ಭದಲ್ಲಿ ಪುಟ್ಟ ಮಗು ಸೇರಿದಂತೆ 8 ಜನರ ನರಮೇಧವಾಗಿದೆ, ಈ ವೇಳೆ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಆಕೆಯನ್ನು ಹತ್ಯೆ ಮಾಡಲು ಬರ್ಬರವಾಗಿ ಹಲ್ಲೆ ನಡೆಸಿ ಕ್ರೌರ್ಯ ಮೆರೆಯಲಾಗಿದೆ ಎಂದು ತಿಳಿಸಿದರು.

ಹಲ್ಲೆಯಿಂದಾಗಿ ಆಕೆ ಮೃತ ಪಟ್ಟಿದ್ದಾಳೆಂದು ಅಪರಾಧಿಗಳು ಭಾವಿಸಿದ್ದರು ಆದರೆ ಆಕೆ ಬದುಕುಳಿದಿದ್ದರಿಂದಾಗಿ ಅಪರಾಧಿಗಳು ಸಿಕ್ಕಿಬಿದ್ದಿದ್ದು ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು ಎಂದು ಹೇಳಿದರು.

ಆದರೆ ಇದೀಗ ಗುಜರಾತ್ ಸರ್ಕಾರ ಆ ಅಪರಾಧಿಗಳನ್ನು ಜೀವಾವಧಿ ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಿರುವ ಕ್ರಮ ಸರಿಯಲ್ಲ ಎಂದರು.

ಪುಟ್ಟ ಮಗು ಸೇರಿದಂತೆ 8 ಜನರ ನರಮೇಧ ಮಾಡಿರುವ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಕ್ರೌರ್ಯ ಮೆರೆದಿರುವ ಅಪರಾಧಿಗಳ ಬಿಡುಗಡೆ ಕ್ರಮವನ್ನು ಮತ್ತೊಮ್ಮೆ ಪರಿಶೀಲಿಸಬೇಕು, ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷೆ ಕೆ.ಬಿ.ಸುಧಾ, ಕೆ.ಎಸ್.ಮಂಜುಳ, ನವೀನ್, ರವಿಕುಮಾರ್, ಧನಂಜಯ ಹಾಜರಿದ್ದರು.