ಬೆಂಗಳೂರು: ಚಂದ್ರಯಾನ-3 ಯಶಸ್ವಿ ಸಂಭ್ರಮಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಂಗಳೂರಿಗೆ ಆಗಮಿಸಲಿದ್ದು, ಇಸ್ರೋ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಲಿದ್ದಾರೆ. ಅಲ್ಲದೇ ಅದ್ಧೂರಿಯಾಗಿ ರೋಡ್ ಶೋ ಸಹ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ, ರೋಡ್ ಶೋ ಆಯೋಜನೆ ಆಗಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗುವ ಸಮಯ ಹತ್ತಿರವಾಗುತ್ತಿದೆ. ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ನೇತೃತ್ವ ಬೇಕು ಎಂದು ವಿಶ್ವ ಬಯಸುತ್ತಿದೆ. ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಪ್ಲ್ಯಾನ್ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಬಿಜೆಪಿಯಿಂದ ಮತದಾರ ಚೇತನ, ಮಹಾಚೇತನ ಅಭಿಯಾನದ ಹಿನ್ನೆಲೆ ಮಾತನಾಡಿದ ಕೇಂದ್ರ ಸಚಿವೆ, ಕಾಲೇಜು ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಹಿತಿ ಇರುವುದಿಲ್ಲ. ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ನಿಧನರಾದವರ ಹೆಸರು ಡಿಲೀಟ್, ನಕಲಿ ಮತದಾರರನ್ನು ಗುರುತಿಸಬೇಕಾಗಿದೆ. ಈ ಕಾರ್ಯವನ್ನು ಬಿಜೆಪಿ ಕೈಗೆತ್ತಿಕೊಂಡಿದೆ ಎಂದು ತಿಳಿಸಿದ್ದಾರೆ.
ಗಡಿ ರಾಜ್ಯಗಳಲ್ಲಿ ನಕಲಿ ಮತದಾರರು ಪತ್ತೆಯಾಗಿದ್ದಾರೆ. ಮತದಾರರ ಹೆಸರನ್ನು ಕೈಬಿಡುವ ಕೆಲಸವೂ ನಡೆದಿತ್ತು. ಜಾತಿ ನೋಡಿ, ಹೆಸರು ನೋಡಿ ಹೆಸರು ತೆಗೆಯಲಾಗಿತ್ತು. ಸರಿಯಾದ ಮತದಾರರ ಪಟ್ಟಿ ತಯಾರಿಗೆ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ. ಆಯೋಗಕ್ಕೆ ಪೂರಕವಾಗಿ ಬಿಜೆಪಿ ಕೆಲಸ ಮಾಡುತ್ತದೆ. 2024ರ ಚುನಾವಣೆಯಲ್ಲಿ ಯಾವುದೇ ಗೊಂದಲ ಆಗಬಾರದು. ಬಿಎಲ್ಎ 2 ನೇಮಕ ಸದ್ಯದಲ್ಲೇ ಮಾಡಲಿದ್ದೇವೆ. ಪಕ್ಷದಿಂದ ಗ್ರಾಮಗಳಲ್ಲಿ ಬಿಎಲ್ಎ 2 ನೇಮಕ ಮಾಡುತ್ತೇವೆ ಎಂದು ಹೇಳಿದ್ದಾರೆ.










