ಚಿಕ್ಕಬಳ್ಳಾಪುರ: ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ…

112
firstsuddi

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಮುಖಂಡ ಹಾಗೂ ದಲಿತ ನಾಯಕ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಭೈರಗಾನಹಳ್ಳಿಯಲ್ಲಿ ನಡೆದಿದೆ.

ಭೈರಗಾನಹಳ್ಳಿ ಗ್ರಾಮದ ನಿವಾಸಿ ನಾರಾಯಣಸ್ವಾಮಿ ಕೊಲೆಯಾದ ವ್ಯಕ್ತಿ. ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿದ್ದ ನಾರಾಯಣಸ್ವಾಮಿ, ರಿಯಲ್ ಎಸ್ಟೆಟ್ ಹಾಗೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಯನಿಮಿತ್ತ ನಿನ್ನೆ ಶಿಡ್ಲಘಟ್ಟ ನಗರದಿಂದ ಸ್ವಗ್ರಾಮಕ್ಕೆ ತನ್ನದೇ ಓಮಿನಿ ಕಾರಿನಲ್ಲಿ ವಾಪಸ್ಸಾಗುವಾಗ, ನಾರಾಯಣಸ್ವಾಮಿ ಗ್ರಾಮದ ಹೊರವಲಯದಲ್ಲಿ ಕಾರು ನಿಲ್ಲಿಸಿ ಫೋನಿನಲ್ಲಿ ಮಾತನಾಡುತ್ತಿದ್ದ, ಆಗ ಕಾರಿನ ಹಿಂದೆ ಬಂದ ದುಷ್ಕರ್ಮಿಗಳು ಕಣ್ಣಿಗೆ ಖಾರದಪುಡಿ ಎರೆಚಿದ್ದಾರೆ. ಆಗ ತಪ್ಪಿಸಿಕೊಂಡು ಹೋಗುತ್ತಿದ್ದ ನಾರಾಯಣಸ್ವಾಮಿಯನ್ನು ಅಟ್ಟಾಡಿಸಿ ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‍ಪಿ ಡಿ.ಎಲ್ ನಾಗೇಶ್ ಹಾಗೂ ದಿಬ್ಬೂರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಹಳೆಯ ದ್ವೇಷದ ಹಿನ್ನಲೆಯಲ್ಲಿ ನಾರಾಯಣಸ್ವಾಮಿ ಅವರನ್ನು ಸಂಚು ರೂಪಿಸಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.