ಬೆಂಗಳೂರು: 8 ತಿಂಗಳ ಮಗುವಿನಲ್ಲಿ ಹ್ಯೂಮನ್ ಮೆಟಾ ಫ್ನ್ಯೊಮೋ ವೈರಸ್ ದೃಢಪಟ್ಟಿದೆ. ಮಗುವಿಗೆ ಜ್ವರ ಬಂದ ಕಾರಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿದೆ. ರಕ್ತ ಪರೀಕ್ಷೆ ಮಾಡಿಸಿದಾಗ ಹೆಚ್‍ಎಂಪಿವಿ ವೈರಸ್ ಇರುವುದು ತಿಳಿದುಬಂದಿದೆ. ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಮಾಹಿತಿ ತಿಳಿಸಿದ್ದಾರೆ. ಎಚ್‍ಎಂಪಿವಿ ವೈರಸ್ ಭಾರತದಲ್ಲೂ ಇದೆ. ಅದು ಮ್ಯೂಟೆಷನ್ ಆಗಿದೆಯಾ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ತಿಳಿದಿಲ್ಲ. ನಮಗೆ ಚೀನಾದಲ್ಲಿ ಮ್ಯುಟೇಟ್ ಆಗಿರುವ ವೈರಸ್ ಹೇಗಿದೆ ಎಂದು ತಿಳಿದಿಲ್ಲ. ಹೀಗಾಗಿ ಇಲ್ಲಿ ಪತ್ತೆಯಾಗಿರುವುದು ಸಾಮಾನ್ಯ ಹೆಚ್‍ಎಂಪಿವಿ ವೈರಸ್ಸೇ ಅಥವಾ ಚೀನಾದ ತಳಿಯಾ ಎಂಬ ಗೊಂದಲವಿದೆ. ಭಾರತದಲ್ಲೂ ಸಾಮಾನ್ಯವಾಗಿ ಹೆಚ್‍ಎಂಪಿವಿ ವೈರಸ್ ಶೇಕಡ 0.78 ರಷ್ಟು ಕಾಣಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸದ್ಯ ಸೋಂಕು ಪತ್ತೆಯಾಗಿರುವ ಮಗುವಿಗೆ ಮತ್ತು ಕುಟುಂಬದವರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಈ ಹಿನ್ನೆಲೆಯ ಬಗ್ಗೆ ಆರೋಗ್ಯ ಇಲಾಖೆ ಕೂಡಾ ಪರಿಶೀಲನೆ ನಡೆಸುತ್ತಿದೆ. ಮಗುವಿನಲ್ಲಿ ವೈರಸ್ ಪತ್ತೆಯಾದ ಕುರಿತು ಕೇಂದ್ರ ಆರೋಗ್ಯ ಇಲಾಖೆಗೆ ರಾಜ್ಯ ಆರೋಗ್ಯ ಇಲಾಖೆ ವರದಿ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಸೂಕ್ತ ಮುನ್ನೆಚ್ಚರಿಕೆಯನ್ನು ವಹಿಸಿ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಕ್ಕೆ ಸೂಚಿಸಲಾಗಿದೆ.










