ಬೆಂಗಳೂರು: ಜ್ಞಾನಭಾರತಿ ಕ್ಯಾಂಪಸ್ನಾದ್ಯಂತ ಬಸ್ ತಂಗುದಾಣಗಳಿಲ್ಲದ ಕಾರಣ ದೈನಂದಿನ ಪ್ರಯಾಣಕ್ಕಾಗಿ ಬಿಎಂಟಿಸಿ ಬಸ್ಗಳನ್ನು ಅವಲಂಬಿಸಿರುವ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ತೊಂದರೆ ಎದುರಿಸುತ್ತಿದ್ದಾರೆ. ಬಸ್ ನಿಲ್ದಾಣಗಳಿಲ್ಲದಿರುವುದು ಬೇಸಿಗೆ ಹಾಗೂ ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮಳೆ ಸಮಯದಲ್ಲಿ ಬಸ್ ಗಳಿಗೆ ಕಾದು ನಿಲ್ಲುವ ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುತ್ತಿದ್ದಾರೆ. ನಂತರ ತರಗತಿಗಳಿಗೆ ಹೋಗುವಂತಾಗುತ್ತಿದೆ. ಬಿಎಂಟಿಸಿ ಜ್ಞಾನಭಾರತಿ ಮಾರ್ಗದಲ್ಲಿ ಬಸ್ ಸೇವೆಗಳನ್ನು ಒದಗಿಸುತ್ತಿದೆ. ಕ್ಯಾಂಪಸ್ನಿಂದ ನಗರದ ಪ್ರಮುಖ ಕೇಂದ್ರಗಳಾದ ಕೆಆರ್ ಮಾರುಕಟ್ಟೆ ಮತ್ತು ಮೆಜೆಸ್ಟಿಕ್, ಉಳ್ಳಾಲ, ಮಲ್ಲತ್ತಹಳ್ಳಿಯಂತಹ ಇತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. 4,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೈನಂದಿನ ಪ್ರಯಾಣಕ್ಕಾಗಿ ಬಸ್ಗಳನ್ನು ಅವಲಂಬಿಸಿದ್ದಾರೆ, ವಿಶ್ವವಿದ್ಯಾಲಯ ಮತ್ತು ಕ್ವಾರ್ಟರ್ಸ್ನಲ್ಲಿ ಎರಡು ಬಸ್ ಶೆಲ್ಟರ್ಗಳನ್ನು ಹೊರತುಪಡಿಸಿದರೆ, ಇನ್ನೆಲ್ಲೂ ಬಸ್ ತಂಗುದಾಣಗಳಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಗಳು ಸಮಸ್ಯೆ ಎದುರಿಸುವಂತಾಗಿದೆ. ವಿದ್ಯಾರ್ಥಿ ನಾಯಕ ಜಿ ಲೋಕೇಶ್ ರಾಮ್ ಎಂಬುವವರು ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಅವಲಂಬಿಸಿದ್ದಾರೆ. ಆದರೆ, ಬಸ್ ನಿಲ್ದಾಣಗಳಿಲ್ಲದ ಕಾರಣ ದೈನಂದಿನ ಸಂಚಾರ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. ಮಳೆಯ ಸಮಯದಲ್ಲಿ ಹೆಚ್ಚು ಸಮಸ್ಯೆಯಾಗುತ್ತಿದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ವಿಶ್ವವಿದ್ಯಾನಿಲಯವು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಒತ್ತಾಯಿಸಿದ್ದಾರೆ.










