ಬೆಳಗಾವಿಯಲ್ಲಿ ‘ಮಹಾ’ ಲಾರಿಗಳಿಗೆ ಕಲ್ಲು ತೂರಾಟ.. ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ…

20
firstsuddi

ಬೆಳಗಾವಿ : ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದೆ. ತಾಲೂಕಿನ ಹಿರೇಬಾಗೆವಾಡಿ ರಾಷ್ಟ್ರೀಯ ಹೆದ್ದಾರಿ ಟೋಲ್ ನಾಕಾ ಬಳಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಆದರೆ, ನಗರ ಪ್ರವೇಶಕ್ಕೂ ಮೊದಲೇ ಟೋಲ್ ನಾಕಾ ಬಳಿಯೇ ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆದರು.

ಈ ವೇಳೆ ಹಿರೇಬಾಗೆವಾಡಿ ಟೋಲ್ ನಾಕಾ ಬಳಿಯಲ್ಲಿ ಮಹಾರಾಷ್ಟ್ರ ನೋಂದಣಿ ಲಾರಿಗಳ ಕಲ್ಲು ತೂರಾಟ ನಡೆಸಿ ನಂಬರ್ ಪ್ಲೇಟ್ ಕಿತ್ತು ಹಾಕಿ ಮಸಿ ಬಳಿದರು. ಕೂಡಲೇ ಹೋರಾಟಗಾರರನ್ನು ಎಳೆದ ಪೊಲೀಸರು ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.

ಈ ವೇಳೆ ಕರವೇ ಕಾರ್ಯಕರ್ತರು ರಕ್ತವನ್ನು ಚೆಲ್ಲುತ್ತೇವೆ ನ್ಯಾಯವನ್ನು ಕೇಳುತ್ತೇವೆ. ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಹಾಗೂ ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ರಸ್ತೆ ಮೇಲೆಯೇ ಮಲಗಿ ಪ್ರತಿಭಟನೆ ನಡೆಸುತ್ತಿದ್ದರೆ ಇನ್ನೂ ಕೆಲವರು ಪೊಲೀಸ್ ವಾಹನವೇರಿ ಕೈಯಲ್ಲಿ ಬಾವುಟ ಹಿಡಿದು ಘೋಷಣೆ ಹಾಕುತ್ತಿದ್ದರು. ಆಗ ಕರವೇ ಕಾರ್ಯಕರ್ತೆಯರನ್ನು ಬಸ್ ಮೇಲಿಂದ ಕೆಳಗೆ ಇಳಿಸಲು ಪೊಲೀಸರ ಹರಸಾಹಸಪಟ್ಟರು.

ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಮಾತನಾಡಿ, ಇವತ್ತು ಒಂದಿನ ನಮ್ಮನ್ನು ತಡೆಯಬಹುದು. ಆದರೆ, ಇದು ಒಂದು ದಿನದ ಚಳುವಳಿ ಅಲ್ಲ. ಕರವೇ ಕಾರ್ಯಕರ್ತರನ್ನ ಬಂಧಿಸಿರುವುದನ್ನ ಧಿಕ್ಕರಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದೆ. ಸರ್ಕಾರ ಇವತ್ತು ಪೊಲೀಸರನ್ನು ಮುಂದಿಟ್ಟುಕೊಂಡು ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಸರ್ಕಾರ ನಮ್ಮ ಚಳುವಳಿ ಹತ್ತಿಕ್ಕಿದರೆ ನಾವು ನಮ್ಮ ಹೋರಾಟ ಇಷ್ಟಕ್ಕೆ ಬಿಡಲ್ಲ. ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡುತ್ತೇವೆ. ಜೊತೆಗೆ ಅಧಿವೇಶನದಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಬಗ್ಗೆ ಕುಳಿತು ಚರ್ಚೆ ಮಾಡುತ್ತೇವೆ ಎಂದರು.