ಬೆಳಗಾವಿಯಿಂದ ಪುಣೆಗೆ ತೆರಳುತ್ತಿದ್ದ ಬಸ್‍ನಲ್ಲಿ ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಬಸ್.

33

ಕೊಲ್ಹಾಪುರ: ಬೆಳಗಾವಿಯಿಂದ ಪುಣೆಗೆ ಪ್ರಯಾಣಿಸುತ್ತದ್ದ ಖಾಸಗಿ ಟ್ರಾವೆಲ್ ಬಸ್‍ಗೆ ಕೊಲ್ಹಾಪುರದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಪರಿಣಾಮ ಬಸ್ ಗೆ ಬೆಂಕಿ ತಗುಲಿದ ಕಾರಣದಿಂದಾಗಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಸುಮಾರಿಗೆ ಪುಣೆ – ಬೆಂಗಳೂರು ಹೆದ್ದಾರಿಯ ಗೋಕುಲ್ ಶಿರಗಾಂವ್ ಮತ್ತು ಉಜಗಾಂವ್ ನಡುವೆ ಈ ಘಟನೆ ನಡೆದಿದೆ.
ಚಲಿಸುತ್ತಿದ್ದ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣವೇ ಕೂಡಲೇ ಬಸ್‍ನಿಂದ ಆರು ಮಂದಿ ಪ್ರಯಾಣಿಕರು ಪಾರಾಗಿದ್ದಾರೆ. ಆದರೆ, ಒಬ್ಬ ಪ್ರಯಾಣಿಕ ನಿದ್ರೆ ಮಂಪಿನಲ್ಲಿದ್ದ ಹೊರಗೆ ಬಾರದೇ ಬಸ್‍ನೊಳಗೆ ಸಿಲುಕಿಕೊಂಡು ಸಜೀವ ದಹನವಾಗಿದ್ದಾನೆ. ಬೆಂಕಿ ಹೊತ್ತಿಕೊಂಡ ತಕ್ಷಣ ಬಸ್ ಚಾಲಕ ಮತ್ತು ಕಂಡಕ್ಟರ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು  ತಿಳಿದುಬಂದಿದೆ. ಖಾಸಗಿ ಕಂಪನಿಯ ಬಸ್ ರಾತ್ರಿ 9 ಗಂಟೆ ಸುಮಾರಿಗೆ ಬೆಳಗಾವಿಯಿಂದ ಹೊರಡುವಾಗ ಸುಮಾರು 30 ಜನ ಪ್ರಯಾಣಿಕರು ಬಸ್ ನಲ್ಲಿದ್ದರು. ಬಸ್‍ಗೆ ಗೋಕುಲ್ ಶಿರಗಾಂವ್‍ನ ಮಯೂರ್ ಪೆಟ್ರೋಲ್ ಪಂಪ್ ಬಳಿ ಬಂದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ಕಂಡ ಚಾಲಕ ಮತ್ತು ಕಂಡಕ್ಟರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಯಾಣಿಕರು ಗಾಬರಿಯಿಂದ ಬಸ್‍ನಿಂದ ಕೆಳಗಿಳಿದರು. ಆದರೆ, ಒಬ್ಬ ಪ್ರಯಾಣಿಕ ಮಲಗಿದ್ದ ಕಾರಣ ಒಳಗೆ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ನೋಡನೋಡುತ್ತಲೇ ಕೆಲವೇ ಹೊತ್ತಿನಲ್ಲಿ ಬಸ್ ಬೆಂಕಿಗೆ ಆಹುತಿಯಾಯಿತು. ಕೊಲ್ಹಾಪುರ ಮಹಾನಗರ ಪಾಲಿಕೆಯ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಅಕಸ್ಮಿಕವಾಗಿ ನಡೆದ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಶಿರಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಸ್ ಚಾಲಕ ಮತ್ತು ಕಂಡಕ್ಟರ್ ನನ್ನು ಹುಡುಕುತ್ತಿದ್ದಾರೆ.