ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲೇ ಎಸ್‍ಡಿಎ ಸಿಬ್ಬಂದಿ ಆತ್ಮಹತ್ಯೆ.

10

ಬೆಳಗಾವಿ: ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲೇ ಸಿಬ್ಬಂದಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ನಡೆದಿದೆ. ಬೆಳಗಾವಿಯ ಮೂಡಲಗಿ ಪಟ್ಟಣದ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಗೆ ಶರಣಾದ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಕಳೆದ 12 ವರ್ಷಗಳಿಂದ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‍ಡಿಸಿ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆಯಷ್ಟೇ ಸವದತ್ತಿ ತಹಶೀಲ್ದಾರ್ ಕಚೇರಿಗೆ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ಈಗ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿಯೇ ರುದ್ರಣ್ಣ ನೇಣಿಗೆ ಶರಣಾಗಿದ್ದಾರೆ. ಬೆನ್ನಲ್ಲೇ ಮೇಲಧಿಕಾರಿಗಳ ಕಿರುಕುಳ ಆರೋಪ ಕೇಳಿಬಂದಿದ್ದು, ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಮತ್ತು ಪೋಲಿಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಖಡೇಬಜಾರ್ ಠಾಣೆ ಪೋಲಿಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.