ವಾಷಿಂಗ್ಟನ್ : ಭಾರತ ಸಂಕಷ್ಟದಲ್ಲಿದ್ದಾಗ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಸಹಾಯ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಹೇಳಿದ್ದಾರೆ.
ಕಳೆದ ವರ್ಷ ನೀವು ಕೋವಿಡ್-19 ಪರಿಹಾರ ಕಾರ್ಯಗಳಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದೀರಿ. ನಿಮ್ಮೆಲ್ಲಾ ಕೆಲಸಕ್ಕೆ ಧನ್ಯವಾದಗಳು. ಕೊರೊನಾದ ಆರಂಭದಲ್ಲಿ, ನಮ್ಮ ಆಸ್ಪತ್ರೆಗಳು ತುಂಬಿತುಳುಕುತ್ತಿದ್ದಾಗ ಭಾರತ ನಮ್ಮ ನೆರವಿಗೆ ಬಂದಿತ್ತು. ಇಂದು ಭಾರತದ ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಲು ಮುಂದಾಗಿದ್ದೇವೆ. ಭಾರತದಲ್ಲಿ ಕೋವಿಡ್-19 ಸೋಂಕುಗಳು ಮತ್ತು ಸಾವುಗಳ ಸಂಖ್ಯೆಯ ಹೆಚ್ಚಳವು ಅತ್ಯಂತ ದಾರುಣವಾದದ್ದು. ನಿಜಕ್ಕೂ ಇದು ಹೃದಯ ವಿದ್ರಾವಕ. ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಮನದಾಳದ ಸಂತಾಪಗಳು.
ಭಾರತದ ಸ್ನೇಹಿತರಾಗಿ, ಏಷ್ಯನ್ ಕ್ವಾಡ್ ಸದಸ್ಯರಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಭಾರತಕ್ಕೆ ಸಂಪೂರ್ಣ ಬೆಂಬಲ ಘೋಷಿಸುವ ಉದ್ದೇಶದಿಂದ ಕೋವಿಡ್ ಲಸಿಕೆಗಳ ಮೇಲಿನ ಪೇಟೆಂಟ್ ಅಮಾನತುಗೊಳಿಸಲಾಗಿದ್ದು, ಇದರಿಂದ ಭಾರತ ಮತ್ತು ಇತರ ರಾಷ್ಟ್ರಗಳು ತಮ್ಮ ಜನರಿಗೆ ಚುಚ್ಚುಮದ್ದು ನೀಡಲು ಸಹಾಯಕವಾಗುತ್ತದೆ ಎಂದರು.
ಏಪ್ರಿಲ್ 26ರಂದು ನಮ್ಮ ಅಧ್ಯಕ್ಷರಾದ ಜೋ ಬೈಡೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮಾತನಾಡಿದ್ದು, ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಏಪ್ರಿಲ್ 30ರ ವೇಳಗೆ ಅಮೆರಿಕದ ಸೇನೆ ಸದಸ್ಯರು ಮತ್ತು ನಾಗರಿಕರು ಎಲ್ಲ ರೀತಿಯ ನೆರವು ನೀಡಲು ನಿರ್ಧರಿಸಿ, ಈ ಕ್ರಮ ಕೈಗೊಂಡಿದೆ. ಈಗಾಗಲೇ ಭಾರತಕ್ಕೆ ಪುನರ್ ಭರ್ತಿ ಮಾಡಬಹುದಾದ ಆಮ್ಲಜನಕ ಸಿಲಿಂಡರ್ ಕಳುಹಿಸಿದ್ದೇವೆ. ಅಲ್ಲದೇ ಓ95 ಮುಖಗವಸು ಹಾಗೂ ರೆಮ್ಡೆಸಿವಿರ್ ಔಷಧಿ ಕಳುಹಿಸಿದ್ದೇವೆ. ಇನ್ನಷ್ಟು ರವಾನೆಗೆ ಸಿದ್ಧವಾಗಿವೆ ಎಂದರು.










