ಭಾರತದೊಂದಿಗೆ ಮೂರು ಯುದ್ಧಗಳ ನಂತರ ಪಾಕಿಸ್ತಾನ ಪಾಠ ಕಲಿತಿದೆ : ಶೆಹಬಾಜ್ ಷರೀಫ್.

49
firstsuddi

ಇಸ್ಲಾಮಾಬಾದ್ : ಭಾರತದೊಂದಿಗೆ ಮೂರು ಯುದ್ಧಗಳನ್ನು ಮಾಡಿದ ನಂತರ ಪಾಕಿಸ್ತಾನವು ಪಾಠ ಕಲಿತಿದೆ. ಇನ್ಮುಂದೆ ಪಾಕಿಸ್ತಾನವು ಶಾಂತಿಯಿಂದಿರಲು ಬಯಸುತ್ತದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಅವರು ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಷರೀಫ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತೇನೆ, ಪಾಕಿಸ್ತಾನವು ಶಾಂತಿಯನ್ನು ಬಯಸುತ್ತದೆ ಆದರೆ ಕಾಶ್ಮೀರದಲ್ಲಿ ಈಗ ನಡೆಯುತ್ತಿರುವ ಸೈನಿಕ ಅಥವಾ ಸರ್ಕಾರ ಕಾರ್ಯಚರಣೆಯನ್ನು ನಿಲ್ಲಿಸಬೇಕು ಎಂದಿದ್ದಾರೆ.

ಇದೇ ವೇಳೆ `ಮಾನವ ಹಕ್ಕುಗಳ ಉಲ್ಲಂಘನೆ’ ಆರೋಪದ ಕುರಿತು ಪ್ರತಿಕ್ರಿಯಿಸಿ, ಅವುಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ನಮ್ಮಲ್ಲಿ ಇಂಜಿನಿಯರ್ ಗಳು, ವೈದ್ಯರು ಮತ್ತು ನುರಿತ ಕಾರ್ಮಿಕರಿದ್ದಾರೆ. ಈ ಆಸ್ತಿಗಳನ್ನು ಸಮೃದ್ಧಿಗಾಗಿ ಬಳಸಿಕೊಳ್ಳಲು ಮತ್ತು ಎರಡೂ ರಾಷ್ಟ್ರಗಳು ಬೆಳೆಯಲು ಈ ಪ್ರದೇಶದಲ್ಲಿ ಶಾಂತಿಯನ್ನು ತರಲು ನಾವು ಬಯಸುತ್ತೇವೆ ಎಂದಿದ್ದಾರೆ.

ಶಾಂತಿಯುತವಾಗಿ ಬದುಕುವುದು ಮತ್ತು ಪ್ರಗತಿ ಸಾಧಿಸುವುದು, ಅಥವಾ ಪರಸ್ಪರ ಜಗಳವಾಡುವುದು ಮತ್ತು ಸಮಯ, ಸಂಪನ್ಮೂಲಗಳನ್ನು ವ್ಯರ್ಥ ಮಾಡುವುದು ನಮಗೆ ಬಿಟ್ಟದ್ದು. ಆದ್ರೆ ನಾವು ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ ನಂತರ ನಮ್ಮ ದೇಶದ ಹೆಚ್ಚಿನ ಜನ ನೋವನ್ನು ಅನುಭವಿಸಿದ್ದಾರೆ. ಬಡತನ, ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ. ಅದರಿಂದ ನಾವು ಪಾಠ ಕಲಿತಿದ್ದೇವೆ. ಹಾಗಾಗಿ ಇನ್ಮುಂದೆ ಶಾಂತಿಯಿಂದ ನೆಲೆಸಿ, ನಮ್ಮ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ಧರಾಗುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಬಾಂಬ್ ಮತ್ತು ಮದ್ದುಗುಂಡುಗಳಿಗಾಗಿ ಸಂಪನ್ಮೂಲಗಳನ್ನು ವ್ಯರ್ಥ ಮಾಡಲು ಪಾಕಿಸ್ತಾನ ಬಯಸುವುದಿಲ್ಲ. ನಾವು ಪರಮಾಣು ಶಕ್ತಿಗಳು, ಸೈನ್ಯದಲ್ಲೂ ಶಸ್ತ್ರಸಜ್ಜಿತರಾಗಿದ್ದೇವೆ ಮತ್ತು ಯುದ್ಧದಿಂದ ನಾವು ದೂರು ನಿಲ್ಲುತ್ತೇವೆ ಎಂದು ಅವರು ಹೇಳಿದರು.