ಭಾರತ್ ಜೋಡೋ ಯಾತ್ರೆಗೆ ಸೂಕ್ತ ಭದ್ರತೆ ಒದಗಿಸಿ : ಅಮಿತ್ ಶಾಗೆ ಮಲ್ಲಿಕಾರ್ಜುನ ಖರ್ಗೆ ಪತ್ರ…

50
firstsuddi

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಸೂಕ್ತ ಭದ್ರತೆ ಒದಗಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.

ಭಾರತ್ ಜೋಡೋ ಯಾತ್ರೆ ಸದ್ಯ ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿದೆ. ನಿನ್ನೆ ಪೊಲೀಸ್ ಭದ್ರತೆ ವೈಫಲ್ಯದಿಂದಾಗಿ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ಖರ್ಗೆ, ಭಾರತ್ ಜೋಡೋ ಯಾತ್ರೆಯ ವೇಳೆ ಸಮರ್ಪಕ ಭದ್ರತೆಯ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಮುಂದಿನ ಎರಡು ದಿನಗಳ ಕಾಲ ಭಾರತ್ ಜೋಡೋ ಯಾತ್ರೆಗೆ ಭಾರೀ ಜನರು ಸೇರುವ ನಿರೀಕ್ಷೆ ಇದೆ. ಶ್ರೀನಗರದಲ್ಲಿ ಜನವರಿ 30ರಂದು ನಡೆಯುವ ಕಾರ್ಯಕ್ರಮಕ್ಕೂ ಭಾರೀ ಜನಸ್ತೋಮ ಇರಲಿದೆ. ಹಿರಿಯ ಕಾಂಗ್ರೆಸ್ಸಿಗರು ಮಾತ್ರವಲ್ಲ ಇತರ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನೀವು ವೈಯಕ್ತಿಕವಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಯಾತ್ರೆ ಸಮಾಪ್ತಿಯಾಗುವವರೆಗೂ ಮತ್ತು ಜನವರಿ 30ರ ಕಾರ್ಯಕ್ರಮ ಮುಗಿಯುವವರೆಗೂ ಅಗತ್ಯ ಭದ್ರತೆ ಒದಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ತಮ್ಮ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

2022 ಸೆಪ್ಟೆಂಬರ್ ನಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡ ಭಾರತ್ ಜೋಡೋ ಯಾತ್ರೆ ಕೇರಳ, ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ, ದೆಹಲಿ, ಉತ್ತರಪ್ರದೇಶ, ಪಂಜಾಬ್, ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಸಂಚರಿಸಿ ಇದೀಗ ಜಮ್ಮು ಕಾಶ್ಮೀರದಲ್ಲಿದೆ. ಜನವರಿ 30ರಂದು ಶ್ರೀನಗರದಲ್ಲಿ ಸಮಾರೋಪ ನಡೆಯಲಿದೆ.