ಭಾರತ ಚುನಾವಣಾ ಆಯೋಗದಿಂದ ರಾಜ್ಯದ 2 ಮಹಿಳಾ ಐಎಎಸ್ ಅಧಿಕಾರಿಗಳಿಗೆ ಪ್ರಶಸ್ತಿ ಘೋಷಣೆ…

47
firstsuddi

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದಿಂದ ಕರ್ನಾಟಕದ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

2023ನೇ ಸಾಲಿನ ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಸಾಮಾನ್ಯ ಪ್ರಶಸ್ತಿ ವರ್ಗದಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಾ ಪ್ರಭು ಹಾಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗೆ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾದ ಶಿಖಾ.ಸಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದಿವ್ಯಾ ಪ್ರಭು ಅವರಿಗೆ ಮತದಾರರ ಪಟ್ಟಿ ನಿರ್ವಹಣೆಯಲ್ಲಿ ಯುವ ಮತದಾರರ ನೋಂದಣಿ, ವಿಶೇಷ ಮತದಾರರ ನೋಂದಣಿ ಹೆಚ್ಚಳ ಸೇರಿದಂತೆ ಚುನಾವಣೆಯಲ್ಲಿ ನಿರ್ವಹಿಸಿದ ಕಾರ್ಯಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮರಾಗಿ ಗುರುತಿಸಿಕೊಂಡಿದ್ದಕ್ಕಾಗಿ ಪ್ರಶಸ್ತಿ ನೀಡಲಾಗುತ್ತಿದೆ.

ಶಿಖಾ ಅವರಿಗೆ 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಆಯುಕ್ತರಾಗಿ ಇಲಾಖೆಯ ಮೂಲಕ ಮತದಾರರಲ್ಲಿ ಉಚಿತ ಉಡುಗೊರೆಗಳ ಕುರಿತು ಹಮ್ಮಿಕೊಂಡಿದ್ದ ಜನಜಾಗೃತಿ, ವಾಣಿಜ್ಯ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತಿ ಪಾಲನೆ ಸೇರಿದಂತೆ ಕಟ್ಟುನಿಟ್ಟಿನ ಚುನಾವಣೆ ನಡೆಸಲು ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ಪ್ರಶಸ್ತಿ ನೀಡಲಾಗುತ್ತಿದೆ.

ಆಯೋಗವು ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಪ್ರೋತ್ಸಾಹಿಸಲು ಹಾಗೂ ಅವರನ್ನು ಅಭಿನಂದಿಸಲು ಪ್ರತಿ ವರ್ಷ ಸಾಮಾನ್ಯ ವರ್ಗ, ವಿಶೇಷ ವರ್ಗ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳು ಹಾಗೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ರಾಜ್ಯ ಎಂದು ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ.

ಆಯೋಗ ಪ್ರತಿ ವರ್ಷ ನವದೆಹಲಿಯಲ್ಲಿ ಜನವರಿ 25 ರಂದು ಹಮ್ಮಿಕೊಳ್ಳುವ ರಾಷ್ಟ್ರೀಯ ಮತದಾರರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.