ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಪಕ್ಷ ತವರು ಮನೆ : ಬಿಜೆಪಿ ಟ್ವೀಟ್…

88
firstsuddi

ಬೆಂಗಳೂರು : ಕಾಂಗ್ರೆಸ್ ನಾಯಕರೇ ಕೆಪಿಸಿಸಿ ಅಧ್ಯಕ್ಷರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದು, ಇದೀಗ ಬಿಜೆಪಿ ಭ್ರಷ್ಟಾಚಾರಕ್ಕೆ ಕಾಂಗ್ರೆಸ್‌ ಪಕ್ಷ ತವರು ಮನೆಯಾಗಿದೆ ಎಂದು ಭ್ರಷ್ಟಾಧ್ಯಕ್ಷ ಹ್ಯಾಷ್ ಟ್ಯಾಗ್​ನೊಂದಿಗೆ ಸರಣಿ ಟ್ವೀಟ್ ಮಾಡಿದೆ. 

ಡಿ.ಕೆ. ಶಿವಕುಮಾರ್ ಅವರೇ, ಸೀಸರ್‌ನ ಪತ್ನಿ ಅನುಮಾನಕ್ಕೆ ಅತೀತವಾಗಿರಬೇಕೆಂಬ ಮಾತಿದೆ. ಆದರೆ ಕೆಪಿಸಿಸಿ ಪಕ್ಷದ ವೇದಿಕೆಯಲ್ಲೇ ನಿಮ್ಮವರೇ ನಿಮ್ಮ ಬಗ್ಗೆ ಆಡಿರುವ ಅಧಿಕೃತ ಮಾತುಗಳ ಬಗ್ಗೆ ನೀವು ಸ್ಪಷ್ಟನೆ ನೀಡಲೇಬೇಕಲ್ಲವೇ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮೇಲೆ ನಡೆದ ಐಟಿ, ಇಡಿ ದಾಳಿ ರಾಜಕೀಯ ಪ್ರೇರಿತ ಎನ್ನುವ ಕಾಂಗ್ರೆಸಿಗರೇ, ನಿಮ್ಮ ಭ್ರಷ್ಟಾಧ್ಯಕ್ಷನ ಧನ ಸಂಪಾದನೆಯ ಮಾರ್ಗ ಯಾವುದೆಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಹಾಗೂ ಸಲೀಂ ಅವರು ಸ್ಪಷ್ಟಪಡಿಸಿದ್ದಾರೆ. ಈಗಲೂ ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುತ್ತೀರಾ? ಎಂದು ಪ್ರಶ್ನಿಸಿದೆ.

ಮುಖ್ಯಮಂತ್ರಿಯಾಗುವ ಡಿ ಕೆ ಶಿವಕುಮಾರ್ ಅವರ ಕನಸಿಗೆ ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕರೇ ಎಳ್ಳು ನೀರು ಬಿಟ್ಟಿದ್ದಾರೆ. ನಿಮ್ಮ ಅಧ್ಯಕ್ಷ ಗಿರಿಯ ತಕ್ಕಡಿ ಏಳುತ್ತಲೇ ಇಲ್ಲ ಎಂದು ಸ್ವಪಕ್ಷೀಯರೇ ಷರಾ ಬರೆದುಬಿಟ್ಟಿದ್ದಾರೆ. ಈ ಮಾತುಗಳು, ಸಿದ್ದರಾಮಯ್ಯ ಅವರ ಬಹುದಿನಗಳ “ಡಿಕೆಶಿ ಪದಚ್ಯುತಿ” ಎಂಬ ಮಾಸ್ಟರ್ ಪ್ಲಾನ್ ನ ಭಾಗವೇ ಎಂದು ಟ್ವೀಟ್ ಮಾಡಿದೆ.

ಡಿಕೆಶಿ ಅವರೇ, ನಿಮ್ಮ ಹುಡುಗರೇ 50 ರಿಂದ 100 ಕೋಟಿ ಇದೆಯಂತೆ, ಹಾಗಾದರೆ ಕೆಪಿಸಿಸಿ ಅಧ್ಯಕ್ಷರಾದ ನಿಮ್ಮ ಬಳಿ ಎಷ್ಟಿರಬಹುದು? ಇದು ಕೆಪಿಸಿಸಿ ಕಚೇರಿಯಿಂದಲೇ ಎದ್ದಿರುವ ಅಧಿಕೃತ ಅನುಮಾನ. ಈ ಪ್ರಶ್ನೆ ರಾಜ್ಯದ ಜನತೆಯನ್ನೂ ಕಾಡುತ್ತಿದೆ. ಇದಕ್ಕೆ ನೀವಲ್ಲದೆ ಇನ್ಯಾರು ಉತ್ತರಿಸುತ್ತಾರೆ ಎಂದು ಬರೆದುಕೊಂಡಿ ಡಿಕೆಶಿಗೆ ಟ್ಯಾಗ್ ಮಾಡಲಾಗಿದೆ.