ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಪ್ರತಿಭಾಕಾರಂಜಿ ಕಾರ್ಯಕ್ರಮಗಳು ಮಾಡಬೇಕು: ಎಸ್. ಎಲ್. ಭೋಜೇಗೌಡ.

70
firstsuddi

ಚಿಕ್ಕಮಗಳೂರು: ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಪ್ರತಿಭಾಕಾರಂಜಿ ಕಾರ್ಯಕ್ರಮಗಳು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಸಲಹೆ ಮಾಡಿದರು.

ನಗರ ಹೊರವಲಯದ ನರಿಗುಡ್ಢೇನಹಳ್ಳಿಯ ಡಾ.ಎಚ್. ನರಸಿಂಹಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ನಿನ್ನೆ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವ ಮಕ್ಕಳಲ್ಲಿ ಯಾವ ಕಲೆ ಸುಪ್ತವಾಗಿ ಅಡಗಿದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬ ಮಕ್ಕಳಲ್ಲೂ ಯಾವುದಾದರೂ ಒಂದು ಕಲೆ ಅಥವಾ ವಿಶೇಷತೆ ಅಡಗಿರುತ್ತದೆ. ಕೆಲವರಿಗೆ ಕಲೆಯನ್ನು ಹೊರ ಹಾಕುವ ವೇದಿಕೆ ದೊರೆತು ಮೇಲೆ ಬರುತ್ತಾರೆ ಆದರೆ ಬಹಳಷ್ಟು ಮಕ್ಕಳು ಅವಕಾಶದಿಂದ ವಂಚಿತರಾಗಿ ಹಾಗೇ ಉಳಿಯುತ್ತಾರೆ ಎಂದು ವಿಷಾದಿಸಿದರು.

ಅಂತಹ ಪ್ರತಿಭೆಗಳನ್ನು ಸಮಾಜದ ಮುಂದೆ ತರುವ ಕೆಲಸವನ್ನು ಪ್ರತಿಭಾ ಕಾರಂಜಿಗಳು ಮಾಡಬೇಕು. ತಮ್ಮ ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು, ಶಿಕ್ಷಕರು ಮಾಡಬೇಕು ಹಾಗಾದಾಗ ಮಾತ್ರ ಸಮಾಜದಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಬೆಳೆಯುತ್ತದೆ ಎಂದು ಕಿವಿ ಮಾತು ಹೇಳಿದರು.

ನಗರಸಭೆ ಸದಸ್ಯೆ ಸಿ.ಎ ಇಂದಿರಾ ಶಂಕರ್ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಲು ಪ್ರತಿಭಾಕಾರಂಜಿ ಸಹಕಾರಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಬಾರ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಪ್ರತಿಭಾಕಾರಂಜಿ ಕಾರ್ಯಕ್ರಮ ರಾಜ್ಯಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕೊಡುಗೆಯಾಗಿದೆ. ಮಕ್ಕಳ ಹಬ್ಬವಾಗಿ ಜಿಲ್ಲೆಯಲ್ಲಿ ಆರಂಭಗೊಂಡ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಪ್ರತಿಭಾಕಾರಂಜಿ ಎಂದು ಕರೆದು ಮುಂದುವರೆಸಿತು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅತಿಥೇಯ ಶಾಲೆಯ ಮುಖ್ಯ ಶಿಕ್ಷಕ ಟಿ.ಜಿ ಚಂದ್ರಾನಾಯಕ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ತಾಲೂಕಿನ 6 ವಲಯಗಳ 85 ಪ್ರೌಢಶಾಲೆಗಳ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.

ಡಾ. ಎಚ್ ನರಸಿಂಹಯ್ಯ ಸ್ಮಾರಕ ಪ್ರೌಢಶಾಲೆಯ ಕಾರ್ಯದರ್ಶಿ ಗಂಗಾಧರ ನಾಯಕ್ ನೋಡಲ್ ಅಧಿಕಾರಿ ಎಂ.ಇ ವಿನೋದ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಕೆ.ಆರ್ ಉದಯಕುಮಾರ್ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಪರಮೇಶ್ವರಪ್ಪ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಗಂಗಾಧರ್ ಶಿಕ್ಷಣ ಸಂಯೋಜಕ ವೀರೇಶ್ ಕೌಲಗಿ ರೂಪಾನಾಯಕ್ ಟಿ.ಜಿ.ಕೆ ಅರಸ್ ಉಪಸ್ಥಿತರಿದ್ದರು.