ಬಾಗಲಕೋಟೆ: ತಮ್ಮ ಪ್ರೀತಿಯನ್ನು ನಿರಾಕರಿಸಿ, ನನ್ನ ಮಗಳಿಂದ ದೂರ ಇರು ಎಂದಿದ್ದಕ್ಕೆ ಯುವಕನೋರ್ವ ತಾನು ಪ್ರೀತಿಸಿದ್ದ ಯುವತಿಯ ತಂದೆಯನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಭಗವತಿ ಗ್ರಾಮದಲ್ಲಿ ನಡೆದಿದೆ.
ದಲಿತ ಯುವಕ ಪ್ರವೀಣ ಕಾಂಬಳೆ ಎಂಬಾತ ಮೇಲ್ಜಾತಿಗೆ ಸೇರಿದ 52 ವರ್ಷದ ಸಂಗನಗೌಡ ಪಾಟೀಲರ ಪುತ್ರಿಯೊಂದಿಗೆ ಸಂಬಂಧ ಹೊಂದಿದ್ದರು. ಆದರೆ, ಸಂಗನಗೌಡ ಪಾಟೀಲ ಅವರು ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ತನ್ನ ಮಗಳಿಂದ ದೂರ ಉಳಿಯುವಂತೆ ಪ್ರವೀಣ ಕಾಂಬಳೆಗೆ ತಾಕೀತು ಮಾಡಿದ್ದರು.
ಕೆಲ ದಿನಗಳ ಹಿಂದಷ್ಟೇ ಮಗಳನ್ನು ಭೇಟಿಯಾಗಲು ಯತ್ನಿಸಿದ್ದಕ್ಕೆ ಕುಪಿತಗೊಂಡ ಸಂಗನಗೌಡ ಪಾಟೀಲ, ಪ್ರವೀಣ ಕಾಂಬಳೆಗೆ ಥಳಿಸಿದ್ದರು. ಆ ಘಟನೆ ನಂತರ ತನ್ನ ತಂದೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಯುವತಿ ಯುವಕನನ್ನು ಭೇಟಿಯಾಗಲು ನಿರಾಕರಿಸಿದ್ದಳು. ನಂತರ ಕುಪಿತಗೊಂಡ ಆರೋಪಿ ಸಂಗನಗೌಡ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ.
ಘಟನಾ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










