ಮದುವೆಯಾಗಲು ನಿರಾಕರಿಸಿದ ಪ್ರಿಯತಮೆಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಪ್ರಿಯತಮ…

279
firstsuddi

ಬೆಂಗಳೂರು : ತನ್ನನ್ನು ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಪ್ರಿಯತಮನೇ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮೂಲದ ನಯನಾ(25) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದ್ದು, ಆರೋಪಿ ತಿಪ್ಪೇಸ್ವಾಮಿ ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಕ್ಯಾಬ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ತಿಪ್ಪೇಸ್ವಾಮಿ ಹಾಗೂ ದಿನಸಿ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ನಯನಾಳಿಗೆ ಕಳೆದ 8 ತಿಂಗಳ ಹಿಂದೆ ಪರಿಚಯವಾಗಿದ್ದು, ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿ ಕಳೆದ 4 ತಿಂಗಳಿನಿಂದ ಇಬ್ಬರು ಸಹಜೀವನ ನಡೆಸುತ್ತಿದ್ದರು. ಹೀಗಾಗಿ ಮೇ.19ರಂದು ತಿಪ್ಪೇಸ್ವಾಮಿ ಅವರು ನಯನಾಳ ಬಳಿ ಮದುವೆಯಾಗೋಣ ಎಂದು ಕೇಳಿದ್ದಾರೆ. ಆಗ ನಯನಾ ನಾನು ಬೇರೊಬ್ಬನನ್ನು ಪ್ರೀತಿಸುತ್ತಿದ್ದೇನೆ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ತಿಪ್ಪೇಸ್ವಾಮಿ ದೋಸೆ ತವಾದಿಂದ ನಯನಾಳ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದು, ಬಳಿಕ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದು, ಈ ಕುರಿತು ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.