ಮದ್ಯಪಾನ ಮಾಡಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿ ಅಪಘಾತ – ಚಾಲಕನಿಗೆ ಮಹಿಳೆಯಿಂದ ಚಪ್ಪಲಿ ಏಟು…

55
firstsuddi

ವಿಜಯಪುರ: ಮದ್ಯಪಾನ ಮಾಡಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿ ಅಪಘಾತ ಮಾಡಿದ ವ್ಯಕ್ತಿಗೆ ಮಹಿಳೆಯೊಬ್ಬಳು ಚಪ್ಪಲಿಯಲ್ಲಿ ಹೊಡೆದಿರುವಂತಹ ಘಟನೆ ನಿನ್ನೆ ರಾತ್ರಿ ನಗರದ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ.

ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರ್ ಚಾಲನೆ ಮಾಡಿ ಎರಡು ಆಟೋ ಹಾಗೂ ಒಂದು ಬೈಕ್​ಗೆ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಆಟೋ ಪಲ್ಟಿ ಆಗಿದೆ. ಪಲ್ಟಿಯಾದ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಕಾರ್ ಚಾಲಕನಿಗೆ ಚಪ್ಪಲಿಯಿಂದ ಥಳಿಸಿದ್ದಾಳೆ. ಬೇಜವಾಬ್ದಾರಿಯಾಗಿ ಹಾಗೂ ಮದ್ಯ ಸೇವಿಸಿ ಕಾರ್ ಚಾಲನೆ ಮಾಡಿ ಅಪಘಾತಕ್ಕೀಡಾಗಿಸಿದಕ್ಕೆ ಮಹಿಳೆ ಆಕ್ರೋಶಗೊಂಡಿದ್ದಾರೆ.

ಆಟೋಗಳಲ್ಲಿ ಹಾಗೂ ಬೈಕ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಹಿಳೆ ಕಾರ್ ಚಾಲಕನಿಗೆ ಚಪ್ಪಲಿ ಏಟು ನೀಡುತ್ತಿರುವ ವೀಡಿಯೋ ವೈರಲ್ ಆಗಿದೆ.

ಆರೋಪಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.