ದಾವಣಗೆರೆ : ಮದ್ಯಪಾನ ಮಾಡಬೇಡಿ ಎಂದು ಬುದ್ದಿ ಹೇಳಿದ್ದಕ್ಕೆ ಪತ್ನಿಯನ್ನೇ ಪತಿ ಕೊಲೆಗೈದಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ನಡೆದಿದ್ದು, ಶಿಲ್ಪ(40) ಪತಿಯಿಂದ ಕೊಲೆಯಾದ ದುರ್ದೈವಿ. ಗಿರೀಶ್ ಪತ್ನಿಯನ್ನ ಹತ್ಯೆಗೈದ ಆರೋಪಿ.
ಕಳೆದ ಎರಡು ವರ್ಷಗಳಿಂದ ಗಿರೀಶ್ ಹಾಗೂ ಶಿಲ್ಪಾ ದಂಪತಿ ಸರಟೂರು ಗ್ರಾಮದಲ್ಲಿ ವಾಸವಿದ್ದರು. ಪ್ರತಿನಿತ್ಯ ಆರೋಪಿ ಕುಡಿದು ಮನೆಗೆ ಬರುತ್ತಿದ್ದನಂತೆ. ಕುಡಿಯಬೇಡಿ ಎಂದು ಗಿರೀಶ್ಗೆ ಶಿಲ್ಪಾ ಬುದ್ಧಿ ಮಾತು ಹೇಳುತ್ತಿದ್ದರು. ಆದರೆ ಒಮ್ಮೆ ಕುಡಿಯಲು ಹಣ ಕೊಡುತ್ತಿಲ್ಲ, ನನಗೆ ಬುದ್ದಿಮಾತು ಹೇಳುತ್ತೀಯಾ ಎಂದು ಗಿರೀಶ್ ಪತ್ನಿಯನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಕುರಿತು ತನಿಖೆ ನಡೆಸಿದ ಹೊನ್ನಾಳಿ ಸಿಪಿಐ ದೇವರಾಜ್ ನೇತೃತ್ವದ ತಂಡ ಕೇವಲ 8 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೊನ್ನಾಳಿ ಪೊಲೀಸ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










