ಮನರಂಜನೆ ಹೆಸರಿನಲ್ಲಿ ಸಂಸ್ಕೃತಿ, ಜಾನಪದ ಕಲೆಗೆ ಅವಮಾನ ಸರಿಯಲ್ಲ : ಸುನೀಲ್ ಕುಮಾರ್.

86
firstsuddi

ಬೆಂಗಳೂರು : ಧನಂಜಯ್ ನಟನೆಯ ಹೆಡ್ ಬುಸ್ ಸಿನಿಮಾದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಕುರಿತಂತೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು, ಮನರಂಜನೆ ಹೆಸರಿನಲ್ಲಿ ಸಂಸ್ಕೃತಿ ಹಗೂ ಜಾನಪದ ಕಲೆಗೆ ಅವಮಾನ ಸರಿಯಲ್ಲ ಎಂದು ಹೇಳಿದರು.

ಇಂದು ಬೆಳಗ್ಗೆ ಕಂಠೀರವ ಕ್ರೀಡಾಂಗಣದಲ್ಲಿ ಜರುಗಲಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮದ ಸಿದ್ಧತೆಯನ್ನು ಸಚಿವರು ವೀಕ್ಷಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿನಿಮಾದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ನಮ್ಮ ರಾಜ್ಯದ ದೇಶದ ಜಾನಪದ ಕಲೆಯನ್ನು ಎಲ್ಲರೂ ಗೌರವಿಸಬೇಕು. ಕೂಡಲೇ ಚಿತ್ರತಂಡ ಜಾನಪದಕ್ಕೆ ಅವಮಾನವಾದ ದೃಶ್ಯಗಳನ್ನು ತೆಗೆದು ಮರು ಚಿತ್ರೀಕರಣ ಮಾಡಬೇಕು. ಕಲೆಗೆ ಅವಮಾನವಾಗದಂತೆ ಚಿತ್ರತಂಡ ಹಾಗೂ ಸಮಾಜ ಜವಾಬ್ದಾರಿ ವಹಿಸಬೇಕು ಎಂದರು.

ಕೋಟಿ ಕಂಠ ಗಾಯನ ಕಾರ್ಯಕ್ರಮ ಕುರಿತು ಮಾತನಾಡಿರುವ ಸಚಿವರು, 1 ಕೋಟಿಗೂ ಹೆಚ್ಚು ಜನ ಕನ್ನಡದ ಆರು ಹಾಡುಗಳನ್ನು ಹಾಡಲಿದ್ದಾರೆ. ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಬೇಕು ಎಂದು ತಯಾರಿ ನಡೆಸಿದ್ದೇವೆ. ನಾಳೆ ವಿಶ್ವದಾದ್ಯಂತ ಕನ್ನಡದ ಕೋಟಿ ಕಂಠ ಗಾಯನ ನಡೆಯುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.