ಮನವಿ ಸಲ್ಲಿಸಲು ಬಂದ ಮಹಿಳೆ ಮೇಲೆ ಅರವಿಂದ್ ಲಿಂಬಾವಳಿ ದರ್ಪ ; ವಿಡಿಯೋ ವೈರಲ್

55
firstsuddi

ಬೆಂಗಳೂರು : ಮನವಿ ಸಲ್ಲಿಸಲು ಬಂದ ಮಹಿಳೆ ಮೇಲೆ ಶಾಸಕ ಅರವಿಂದ್ ಲಿಂಬಾವಳಿ ದರ್ಪ ತೋರಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಳೆ ಅನಾಹುತ ಪ್ರದೇಶವಾದ ವರ್ತೂರು ಕೆರೆ ಕೋಡಿ ವೀಕ್ಷಿಸಲು ಅಧಿಕಾರಿಗಳ ಜೊತೆ ಅರವಿಂದ್ ಲಿಂಬಾವಳಿ ಬಂದಿದ್ದರು. ಈ ವೇಳೆ ಮಹಿಳೆಯೊಬ್ಬರು ಪತ್ರ ಹಿಡಿದು ಮನವಿ ಸಲ್ಲಿಸಲು ಬಂದಿದ್ದರು.

ವೈರಲ್ ವಿಡಿಯೋದಲ್ಲಿ ಏನಿದೆ?

ಮಹಿಳೆ : ಸರ್ ಒಂದು ನಿಮಿಷ ಸರ್
ಅರವಿಂದ್ ಲಿಂಬಾವಳಿ: ಹೇ.. ಕೊಡಮ್ಮ ಇಲ್ಲಿ. ಹೇಯ್.. ಕೊಡೆ ಇಲ್ಲಿ.
ಮಹಿಳೆ: ಸರ್ ಇದು ಡಾಕ್ಯುಮೆಂಟ್, ಸ್ವಲ್ಪ ಇರಿ ಸರ್. ಕೇಳಿಸ್ಕೊಳಿ.
ಅರವಿಂದ್ ಲಿಂಬಾವಳಿ: ಹೇಯ್… ಏನ್ ಕೇಳಿಸ್ಕೊಳೋದು, ಮುಚ್ಚುಬಾಯಿ.
ಮಹಿಳೆ: ಸರ್ ಏನ್ ಸರ್, ಸ್ವಲ್ಪ ಮರ್ಯಾದೆ ಕೊಡಿ. ಮಹಿಳೆ ಅಂತಾ.
ಅರವಿಂದ್ ಲಿಂಬಾವಳಿ: ಏನ್ ಮರ್ಯಾದೆ ನಿಂಗೆ.. ಒತ್ತುವರಿ ಮಾಡಿದ್ದಲ್ಲದೇ, ಮರ್ಯಾದೆ ಬೇರೆ ಕೊಡಬೇಕಾ ನಿಂಗೆ.
ಮಹಿಳೆ: ಸ್ವಲ್ಪ ಡಾಂಕ್ಯುಮೆಂಟ್ ಪರಿಶೀಲಿಸಿ ನೋಡಿ ಸರ್.. ಆಮೇಲೆ ತೀರ್ಮಾನ ಮಾಡಿ.. ನಾನೆಲ್ಲಿ ಒತ್ತುವರಿ ಮಾಡಿದ್ದೀನಿ.
ಅರವಿಂದ್ ಲಿಂಬಾವಳಿ: ಬೇರೆ ಭಾಷೆ ಬರುತ್ತದೆ ನನಗೆ.
ಮಹಿಳೆ: ಏನ್ ಮಾತನಾಡುತ್ತಿದ್ದೀರಾ ನೀವು… ಬಿಡಲ್ಲ ನಾನು.
ಅರವಿಂದ್ ಲಿಂಬಾವಳಿ: ನಾನು ಬಿಡಲ್ಲ ನಿನ್ನ.. ನಡಿ ಪೊಲೀಸ್ ಸ್ಟೇಷನ್ ಗೆ, ಕತ್ತು ಹಿಡಿದು ಒಳಗೆ ಹಾಕಿಸುತ್ತೇನೆ.
ಮಹಿಳೆ: ಸರ್ ನಾನು ನ್ಯಾಯ ಕೇಳುತ್ತಿದ್ದೇನೆ.
ಅರವಿಂದ್ ಲಿಂಬಾವಳಿ: ಒತ್ತುವರಿ ಮಾಡಿ ನ್ಯಾಯ ಕೇಳ್ತಿಯಾ? ನಾಚಿಕೆ ಆಗಲ್ವಾ ನಿನಗೆ

ಇದೀಗ ಶಾಸಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹಿನ್ನಲೆ ಮಹಿಳೆ ವಿರುದ್ಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲು ಮಾಡಲಾಗಿದೆ.

ಮತ್ತೊಂದೆಡೆ ಶಾಸಕ ಅರವಿಂದ್ ಲಿಂಬಾವಳಿ ವರ್ತನೆಯನ್ನು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ ಖಂಡಿಸಿದೆ. ‘ಇದೇನಿದು ಅರವಿಂದ್ ಲಿಂಬಾವಳಿ ಅವರೇ? ಒಂದು ಹೆಣ್ಣಿನೊಂದಿಗೆ ನಡೆದುಕೊಳ್ಳುವ ರೀತಿಯೇ ಇದು? ತಪ್ಪಿದ್ದರೆ ಕಾನೂನಿದೆ. ಇದೇನು ನಿಮ್ಮ ಮಾತುಗಳು? ನಿಮ್ಮ ಸ್ಥಾನಕ್ಕೆ ಶೋಭೆ ತರುವುದೆ? ಅಧಿಕಾರ ಶಾಶ್ವತ ಅಲ್ಲ, ಅದೇತಕೆ ಇಷ್ಟು ದರ್ಪ?’ ಎಂದು ಪ್ರಶ್ನೆ ಮಾಡಿದೆ.