ಬೆಂಗಳೂರು: ಮಹಿಳೆ ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿದ ಕಿಡಿಗೇಡಿಯೊಬ್ಬ ಆಕೆಯ ಕುತ್ತಿಗೆ ಹಿಸುಕಿ ಹತ್ಯೆಗೈದು ಪರಾರಿಯಾಗಿರುವ ಘಟನೆ ನಿನ್ನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಭಾಕರ ರೆಡ್ಡಿ ಲೇಔಟ್ ನಿವಾಸಿ ನೀಲಂ (30) ಕೊಲೆಯಾದ ದುರ್ದೈವಿ. ಈ ಕೃತ್ಯದಲ್ಲಿ ಮೃತರ ಪರಿಚಿತನ ಕೈವಾಡದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ನೀಲಂ ಪತಿ ಪ್ರದ್ಯುಮ್ನ ಎಂಬುವವರು ದೂರು ನೀಡಿದ್ದಾರೆ.
ಹದಿಮೂರು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದ ಉತ್ತರಪ್ರದೇಶ ಮೂಲದ ಪ್ರದ್ಯುಮ್ನ ಅವರು, ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಪ್ರಭಾಕರ ರೆಡ್ಡಿ ಲೇಔಟ್ ನಲ್ಲಿ ನೆಲೆಸಿದ್ದರು. ಮನೆ ಸಮೀಪದಲ್ಲೇ ಹಾರ್ಡ್ ವೇರ್ ಮಳಿಗೆ ನಡೆಸುತ್ತಿದ್ದ ಪ್ರದ್ಯುಮ್ನ, ಪೇಂಟರ್ ಗುತ್ತಿಗೆದಾರರೂ ಆಗಿದ್ದಾರೆ. ಎಂದಿನಂತೆ ಬೆಳಗ್ಗೆ ಅಂಗಡಿಗೆ ಬಾಗಿಲು ತೆರೆಯಲು ಅವರು ಮನೆಯಿಂದ ಹೊರಟರೆ, ಮಕ್ಕಳು ಶಾಲೆಗೆ ತೆರಳಿದ್ದರು. ಆಗ ನೀಲಂ ಮಾತ್ರ ಮನೆಯಲ್ಲಿದ್ದಾಗ ಬೆಳಗ್ಗೆ 11.30ರ ಸುಮಾರಿಗೆ ಮನೆಗೆ ನುಗ್ಗಿದ ಆರೋಪಿ ಹತ್ಯೆ ಎಸಗಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳು ಶಾಲೆ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ವೇಳೆ ಮನೆಯಲ್ಲಿ ಚಿನ್ನಾಭರಣ, ನಗದು ಅಥವಾ ಬೇರೆ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ಹೀಗಾಗಿ ಪರಿಚಯಸ್ಥರೇ ಬಂದು ಕೊಲೆಗೈದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










