ಕಾಡಾನೆ ದಾಳಿಗೆ ಕಾರ್ಮಿಕ ಬಲಿ…

49
firstsuddi

ಹಾಸನ: ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಕಾರ್ಮಿಕನೋರ್ವ ಒಂಟಿ ಸಲಗದ ದಾಳಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ನಡೆದಿದೆ.

ಕಾರ್ಮಿಕ ವಸಂತ್ (45) ನಿನ್ನೆ ಸಂಜೆ ಸುಮಾರು 6-30ರ ವೇಳೆಯಲ್ಲಿ ಕೆಲಸ ಮುಗಿಸಿ ತನ್ನ ಆಪ್ತನ ಜೊತೆಗೆ ವಾಪಸ್ ಮರಳುತ್ತಿದ್ದರು. ಈ ವೇಳೆ ಏಕಾಏಕಿ ಕಾಣಿಸಿದ ಒಂಟಿ ಸಲಗ ವಸಂತ್ ಮೇಲೆ ದಾಳಿ ಮಾಡಿದೆ. ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಮೃತದೇಹ ಮೇಲೆತ್ತಲು ಬಿಡದೆ ಸ್ಥಳೀಯರು ಅಹೋರಾತ್ರಿ ಪ್ರತಿಭಟನೆ ಶುರುಮಾಡಿದ್ದರು.

ನಿರಂತರವಾಗಿ ಆನೆ ದಾಳಿಗಳಿಗೆ ಜನರು ಬಲಿಯಾಗುತ್ತಿದ್ದು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೆ ಶವವನ್ನು ಸ್ಥಳದಿಂದ ಮೇಲೆತ್ತಲು ಬಿಡಲ್ಲ ಎಂದು ಜನರು ಧರಣಿ ಆರಂಭಿಸಿದ್ದಾರೆ. ನಿಮ್ಮ ಪರಿಹಾರ ಬೇಡ ನಮ್ಮ ಸಮಸ್ಯೆಗೆ ಪರಿಹಾರ ಕೊಡಿ ಎಂದು ಜನ ಪಟ್ಟು ಹಿಡಿದಿದ್ದಾರೆ.

ಘಟನಾ ಸ್ಥಳಕ್ಕೆ ಬೇಲೂರು ಶಾಸಕ ಎಚ್​​ಕೆ ಸುರೇಶ ಹಾಗೂ ಎಸ್‍ಪಿ ಮೊಹಮ್ಮದ್ ಸುಜಿತ ಇಂದು ಬೆಳಗ್ಗೆ ಭೇಟಿ ನೀಡಿದ್ದಾರೆ. ಜನರ ಮನವೊಲಿಕೆ ಮಾಡಲು ಪೊಲೀಸರು ಹಾಗು ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.