ಮನೆಯಲ್ಲೇ ಮಲಗಿದ್ದ ಮಗು – ಕಿಡ್ನ್ಯಾಪ್ ಕೇಸ್ ದಾಖಲಿಸಿದ ಪೋಷಕರು…

48
firstsuddi

ಬೆಂಗಳೂರು: ಮನೆಯಲ್ಲೇ ಮಲಗಿದ್ದ ಮಗುವನ್ನು ಸರಿಯಾಗಿ ಗಮನಿಸದೇ ಪೋಷಕರು, ಮಗು ಕಿಡ್ನ್ಯಾಪ್ ಆಗಿದೆ ಎಂದು ಕೇಸ್ ದಾಖಲಿಸಿರುವ ಘಟನೆ ನಗರದ ಕೆ.ಆರ್ ಪುರಂನ ಜನತಾ ಕಾಲೋನಿಯಲ್ಲಿ ನಡೆದಿದೆ.

ಮೀನಾ ದಂಪತಿ ನಿನ್ನೆ ರಾತ್ರಿ ಸುಮಾರು 7.30ರ ವೇಳೆ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ಬಂದು ತಮ್ಮ 6 ವರ್ಷದ ಮಗಳು ಕಿಡ್ನ್ಯಾಪ್ ಆಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಮಗಳು ಈಗ ಕಾಣಿಸುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಹುಡುಕಾಟ ನಡೆಸಿದ್ದರು.

ಬಳಿಕ ಕಿಡ್ನ್ಯಾಪ್ ಆದ ಸ್ಥಳದಲ್ಲಿ ಏನಾದರೂ ಸುಳಿವು ಸಿಗುವುದೋ ಎಂದು ಪೊಲೀಸರು ಹುಡುಕಾಟಕ್ಕೆಂದು ಮನೆಗೆ ಬಂದಾಗ ಮನೆಯೊಳಗೆ ಬಟ್ಟೆ ಕೆಳಗೆ ಮಗು ಮಲಗಿ ನಿದ್ರಿಸುತ್ತಿದ್ದಿದ್ದು, ಕಂಡು ಬಂದಿದೆ.

ಮಗಳು ಮಲಗಿದಾಗ ತಾಯಿ ಒಣಗಿದ್ದ ಬಟ್ಟೆಯನ್ನು ಮಗುವಿನ ಮೇಲೆ ತಂದು ಹಾಕಿ ಹೋಗಿದ್ದಳು. ಮಗು ಮಲಗಿ ಚೆನ್ನಾಗಿ ನಿದ್ರಿಸಿದ್ದ ಕಾರಣ ತಾಯಿ ಬಟ್ಟೆ ಹಾಕಿದ್ರೂ ಎಚ್ಚರಗೊಂಡಿರಲಿಲ್ಲ. ಹೀಗಾಗಿ ತಾಯಿ ಹಾಗೂ ತಂದೆ ಮಗುವಿಗಾಗಿ ಹುಡುಕಾಟ ನಡೆಸಿದ್ದು ಕಾಣದೇ ಇದ್ದಾಗ ಗಾಬರಿಯಾಗಿ ದೂರು ನೀಡಿದ್ದಾರೆ.

ಮಗು ಸಿಕ್ಕಿದ್ದಕ್ಕೆ ಪೋಷಕರು ನಿರಾಳರಾಗಿದ್ದು ಪೋಷಕರ ಈ ಬೇಜವಾಬ್ದಾರಿತನಕ್ಕೆ ಪೊಲೀಸರು ಶಾಕ್ ಆಗಿದ್ದಾರೆ.