ಮರು ಮದುವೆಗೆ ಅಡ್ಡಿಯಾಗುತ್ತೆ ಎಂದು 14 ತಿಂಗಳ ಹಸುಗೂಸನ್ನೇ ಕೊಲೆಗೈದ ಪಾಪಿ ತಂದೆ…

70
firstsuddi

ರಾಯಚೂರು: ಮರು ಮದುವೆಗೆ ಮಗು ಅಡ್ಡಿಯಾಗುತ್ತದೆ ಎಂದು ವ್ಯಕ್ತಿಯೊಬ್ಬ ತನ್ನ 14 ತಿಂಗಳ ಮಗುವನ್ನು ಕೊಲೆಗೈದಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕನಸಾವಿ ಗ್ರಾಮದಲ್ಲಿ ನಡೆದಿದೆ.

ಆರೋಪಿಯನ್ನು ಲಿಂಗಸುಗೂರು ತಾಲೂಕಿನ ಕನಸಾವಿ ಗ್ರಾಮದ ನಿವಾಸಿ 32 ವರ್ಷದ ಮಹಾಂತೇಶ್ ಎಂದು ಗುರುತಿಸಲಾಗಿದೆ. ಮೃತ ಮಗುವನ್ನು ಅಭಿನವ್ ಎಂದು ಗುರುತಿಸಲಾಗಿದೆ.

ಪರ ಪುರುಷನೊಂದಿಗೆ ಪತ್ನಿ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ಹೊಂದಿದ್ದ ಮಹಾಂತೇಶ್, ಎರಡನೇ ಮದುವೆಗೆ ಮುಂದಾಗಿದ್ದ. ಆದರೆ, ಮರು ಮದುವೆಗೆ ಮಗು ಅಡ್ಡಿಯಾಗುತ್ತದೆ ಎಂದು ಭಾವಿಸಿ ಮಗುವನ್ನು ಕೊಂದು ಕಲ್ಲಿನ ಅಡಿಯಲ್ಲಿ 3 ದಿನ ಮುಚ್ಚಿಟ್ಟಿದ್ದಾನೆ.

ಈ ನಡುವೆ ಮಗು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಮಹಾಂತೇಶ್ ಮೇಲೆ ಅನುಮಾನ ಬಂದಿದ್ದು, ಆತನನ್ನು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ಆರೋಪಿ, ಮೊದಲು ಮಗುವನ್ನು ಸುಟ್ಟು ಹಾಕಿರುವುದಾಗಿ ಮಾಹಿತಿ ನೀಡಿದ್ದ. ಬಳಿಕ ಕಲ್ಲಿನ ಅಡಿ ಮುಚ್ಚಿಟ್ಟ ಮಗುವನ್ನು ತೋರಿಸಿದ್ದಾನೆ.

ಇದೀಗ ಮೃತದೇಹವನ್ನು ಹೊರತೆಗೆದಿರುವ ಪೊಲೀಸರು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.