ಕೇಪ್ ಟೌನ್: ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಮಹಿಳಾ ತಂಡ 5 ರನ್ ಗಳ ರೋಚಕ ಜಯ ಸಾಧಿಸಿದೆ. ಇದರಿಂದ ಮತ್ತೆ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು 4 ವಿಕೆಟ್ ಗೆ 172 ರನ್ ಗಳಿಸಿತ್ತು. 173 ರನ್ ಗಳ ಕಠಿಣ ಗುರಿ ಪಡೆದ ಭಾರತ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಟೀಂ ಇಂಡಿಯಾ ಪರ ಹರ್ಮನ್ ಪ್ರೀತ್ ಕೌರ್ 52, ಜೆಮಿಯಾ ರಾಡ್ರಿಗನ್ 43 ಹಾಗೂ ದೀಪ್ತಿ ಶರ್ಮಾ 20 ರನ್ ಗಳಿಸಿದರು. ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಇದರಿಂದಾಗಿ ಭಾರತ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ ಆಸ್ಟ್ರೇಲಿಯಾ ತಂಡ 5 ರನ್ ಗಳಿಂದ ರೋಚಕ ಗೆಲುವು ಸಾಧಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಹಿಳಾ ತಂಡ ಉತ್ತಮ ಶುಭಾರಂಭ ಪಡೆದುಕೊಂಡಿತು. ಆಸ್ಟ್ರೇಲಿಯಾ ಪರ ಬೆತ್ ಮೂನಿ 54, ಮೆಗಾ ಲ್ಯಾನಿಂಗ್ 49, ಆಶ್ಲೇ ಗಾರ್ಡ್ನರ್ 31 ರನ್ ಗಳಿಸಿದರು. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಗೆ ಮುಂದಾದ ಆಶ್ಲೇ 18 ಎಸೆತಗಳಲ್ಲಿ 31 ರನ್ ಸಿಡಿಸಿದರು. ಕೊನೆವರೆಗೂ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಮೆಗ್ ಲ್ಯಾನಿಂಗ್ 34 ಎಸೆತಗಳಲ್ಲಿ ಅಜೇಯ 49 ರನ್ ಕಲೆಹಾಕಿದರು. ಅಂತಿಮವಾಗಿ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 172 ರನ್ ಪೇರಿಸಿತು.