ಬೆಂಗಳೂರು : ಮಹಿಳಾ ಪ್ರೀಮಿಯರ್ ಲೀಗ್ ಮಾರ್ಚ್ 4ರಿಂದ ಪ್ರಾರಂಭವಾಗಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಮೆಂಟರ್ ಆಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ನೇಮಕ ಮಾಡಲಾಗಿದೆ. ಇದನ್ನು ಆರ್‌ಸಿಬಿ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.
ಭಾರತದ ಮುಂಚೂಣಿ ಕ್ರೀಡಾಪಟು, ಯೂತ್ ಐಕಾನ್, ವೃತ್ತಿಜೀವನದುದ್ದಕ್ಕೂ ಧೈರ್ಯಶಾಲಿ ಮತ್ತು ಎಲ್ಲ ಅಡೆತಡೆಗಳನ್ನು ಮೀರಿ ಆಡಿದ ಆಟಗಾರ್ತಿ, ಮೈದಾನದ ಒಳಗೂ ಹೊರಗೂ ಚಾಂಪಿಯನ್ ಸಾನಿಯಾ ಮಿರ್ಜಾ, ಅವರನ್ನು ಆರ್ ಸಿಬಿ ಮಹಿಳಾ ಕ್ರಿಕೆಟ್ ತಂಡದ ಸಲಹೆಗಾರರಾಗಿ ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಆರ್ ಸಿಬಿ ಟ್ವಿಟರ್ ಪುಟದಲ್ಲಿ ಬರೆಯಲಾಗಿದೆ.
ಆರ್‌ಸಿಬಿ ಮೆಂಟರ್ ಆಗಿ ನೇಮಕಗೊಂಡಿರುವುದಕ್ಕೆ ಸಾನಿಯಾ ಮಿರ್ಜಾ ಸಂತಸ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಮಹಿಳಾ ತಂಡವನ್ನು ಭೇಟಿಯಾಗಲು ಸಂತೋಷವಾಗಿದೆ. ಮಹಿಳಾ ಪ್ರೀಮಿಯರ್ ಲೀಗ್ ನೊಂದಿಗೆ ಮಹಿಳಾ ಕ್ರಿಕೆಟ್ ಹೊಸ ಎತ್ತರವನ್ನು ತಲುಪುವುದು ಖಚಿತ. ಈ ರೀತಿಯ ಮೆಗಾ ಲೀಗ್ ಗಳು ಹುಡುಗಿಯರಿಗೆ ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆ ಮಾಡಲು ದಾರಿ ಮಾಡಿಕೊಡುತ್ತವೆ. ಮಾರ್ಗದರ್ಶಕರ ಪಾತ್ರವನ್ನು ತೆಗೆದುಕೊಳ್ಳಲು ಉತ್ಸುಕಳಾಗಿದ್ದೇನೆ ಎಂದು ಸಾನಿಯಾ ಪ್ರತಿಕ್ರಿಯಿಸಿದ್ದಾರೆ.
ಮಿರ್ಜಾ ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ನಂತರ ಕ್ರೀಡೆಯಿಂದ ನಿವೃತ್ತರಾದರು. ಆಸ್ಟ್ರೇಲಿಯನ್ ಓಪನ್ ನಲ್ಲಿ ರೋಹನ್ ಬೋಪಣ್ಣ ಅವರ ಜೊತೆ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ರನ್ನರ್-ಅಪ್ ಆಗಿ ಹೊರಹೊಮ್ಮಿದ್ದರು.