ಮಾಂಡೌಸ್ ಚಂಡಮಾರುತ ಎಫೆಕ್ಟ್ – ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ, ವಿಪರೀತ ಚಳಿ…

51
firstsuddi

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಮಾಂಡೌಸ್ ಚಂಡಮಾರುತದ ಹಿನ್ನೆಲೆ ಬೆಂಗಳೂರಿನಲ್ಲಿ ಒಂದು ಕಡೆ ವಿಪರೀತ ಚಳಿ, ಮತ್ತೊಂದು ಕಡೆ ತುಂತುರು ಮಳೆಯಾಗುತ್ತಿದೆ.

ಮಾಂಡೌಸ್ ಚಂಡಮಾರುತ ಗಂಟೆಗೆ 85 ಕಿಲೋ ಮೀಟರ್ ವೇಗವಾಗಿ ಭೂಮಿಗೆ ಅಪ್ಪಳಿಸಿದ್ದು, ಇದರಿಂದಾಗಿ ರಣ ಮಳೆ ಜೊತೆಗೆ ವಿಪರೀತ ಚಳಿ ಹೆಚ್ಚಾಗಲಿದೆ ಎಂದು ದಕ್ಷಿಣ ಭಾರತದ ರಾಜ್ಯಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದಿನಿಂದ 3 ದಿನ ಮಳೆಯಾಗುವ ಸಾಧ್ಯತೆಯಿದೆ. ಇಂದು ಮತ್ತು ನಾಳೆ ಬೆಂಗಳೂರು ನಗರದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಮಳೆಯಿಂದಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಹವಾಮಾನ ವೈಪರೀತ್ಯದಿಂದಾಗಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವಾರು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ನೆರೆಯ ಪುದುಚೇರಿ, ಪಿಳ್ಳೈಚಾವಡಿ ಗ್ರಾಮದಲ್ಲಿ 15 ಮನೆಗಳು ಕುಸಿದಿವೆ. ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ವಿಲ್ಲುಪುರಂ, ಕಡಲೂರು, ಕಲ್ಲಕುರಿಚಿ, ವೆಲ್ಲೂರು ಮತ್ತು ರಾಣಿಪೇಟ್ ಸೇರಿದಂತೆ 15 ಜಿಲ್ಲೆಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.