ಬೆಂಗಳೂರು: ಒಮಿಕ್ರಾನ್ ಉಪತಳಿ JN.1 ತಳಿಯಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಇರಬೇಕು, ಕ್ರಮ ಅನುಸರಿಸಬೇಕು. ಮಾಸ್ಕ್ ಕಡ್ಡಾಯ ಮಾಡಲ್ಲ. ಕಡ್ಡಾಯ ಮಾಡುವ ಪರಿಸ್ಥಿತಿ ಉಂಟಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇಂದು ಗೃಹ ಕಚೇರಿ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಬಂದಿರುವುದು JN.1 ಓಮ್ರಿಕಾನ್ ಉಪತಳಿಯಾಗಿದೆ. ರಾಜ್ಯದಲ್ಲಿ 92 ಜನರಿಗೆ ಪಾಸಿಟಿವ್ ಎನ್ನುವುದು ಗೊತ್ತಾಗಿದೆ. ಬೆಂಗಳೂರು ನಗರದಲ್ಲೇ 80 ಕೇಸ್ ಇವೆ. ಮೈಸೂರು 5, ಸೇರಿದಂತೆ 372 ಸೋಂಕಿತರಿಗೆ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. 20 ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಜನ ಐಸಿಯುನಲ್ಲಿ ಇದ್ದಾರೆ. ಆದ್ರೆ, ಕೋವಿಡ್ ನಿಂದ ಅಲ್ಲ. ಅವರಿಗೆ ಬೇರೆ ಬೇರೆ ಕಾಯಿಲೆಗಳು ಇವೆ. ಇನ್ನು ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಇದ್ದ ಮೂರು ಜನ ಸಾವನ್ನಪ್ಪಿದ್ದಾರೆ. ಕೋವಿಡ್ ನಿಂದಲೇ ಸಾವನ್ನಪ್ಪಿದ್ದಾರೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಕಿಡ್ನಿ, ಶ್ವಾಸಕೋಶ, ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವಿವರಿಸಿದರು.
ಶನಿವಾರದಿಂದ ಪ್ರತಿದಿನ 5 ಸಾವಿರ ಟೆಸ್ಟ್ ಪ್ರಾರಂಭ ಮಾಡ್ತೀವಿ. ಕ್ಯಾಬಿನೆಟ್ ಸಬ್ ಕಮಿಟಿ ರಚನೆ ಮಾಡ್ತೀವಿ. ಯಾರು ಹೆಡ್ ಅಂತ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡ್ತೀವಿ. ಕ್ಯಾಬಿನೆಟ್ ಸಬ್ ಕಮಿಟಿ ನಿರಂತರವಾಗಿ ಕೆಲಸ ಮಾಡಬೇಕು. ತಜ್ಞರ ಜೊತೆ ಸಂಯೋಜನೆಯಾಗಿ ಕೆಲಸ ಮಾಡಬೇಕು. ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಯಾವುದೇ ಶಿಫಾರಸು ಮಾಡಿದರು ಅದನ್ನ ಜಾರಿ ಮಾಡಬೇಕು. ಗಡಿ ಜಿಲ್ಲೆಯಲ್ಲಿ ಹೆಚ್ಚು ಟೆಸ್ಟ್ ಮಾಡಬೇಕು. ಜನಸಂದಣಿ ಇರುವಲ್ಲಿ ಮಾಸ್ಕ್ ಹಾಕಬೇಕು. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ಎಂದರು.
ಇಂದು ತಜ್ಞರ ಸಲಹೆಗಳನ್ನು ಪಡೆದಿದ್ದೇವೆ. ಈ ಹಿಂದೆ ಮಾಡಿದ ತಪ್ಪು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದೇನೆ. ಆಕ್ಸಿಜನ್, ಬೆಡ್, ಔಷಧಿ ಯಾವುದೂ ಕೊರತೆ ಆಗಬಾರದು. ಬೇರೆ ಕಾಯಿಲೆ ಇರೋರಿಗೂ ಚಿಕಿತ್ಸೆ ಕೊಡಲು ಸೂಚನೆ ನೀಡಲಾಗಿದೆ. ಯಾವುದೇ ಕೊರತೆ ಆಗದಂತೆ ಸೂಚನೆ ನೀಡಿದ್ದೇನೆ. ಲಸಿಕೆ ಅಭಿಯಾನ ಕೂಡಾ ಅಗತ್ಯವಿದ್ದರೆ ಶುರು ಮಾಡಲು ತಿಳಿಸಿದ್ದೇನೆ. ಯಾರು ತೆಗೆದುಕೊಂಡಿಲ್ಲ ಅವರು ಲಸಿಕೆ ಪಡೆಯಬೇಕು ಎಂದರು. ಇನ್ನು ಇದೇ ವೇಳೆ ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.










