ಮುಡಾ ಹಗರಣ ಮುಚ್ಚಿಹಾಕಲು ಲೋಕಾಯುಕ್ತ ಪ್ರಯತ್ನ: ಬಿಜೆಪಿ ಆರೋಪ.

33

ಬೆಂಗಳೂರು: ಮುಡಾ ಹಗರಣ ಮುಚ್ಚಿಹಾಕಲು ಲೋಕಾಯುಕ್ತ ಪ್ರಯತ್ನ ನಡೆಸುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಇದರ ವಿರುದ್ಧ ಹೋರಾಟ ನಡೆಸುತ್ತೇವೆಂದು ನಿನ್ನೆ ಹೇಳಿದೆ. ಮಾಧ್ಯಮಗಾರರೊಂದಿಗೆ ಮಾತನಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸುವ ಮುನ್ನವೇ ಮುಖ್ಯಮಂತ್ರಿ ಕಚೇರಿ ಲೋಕಾಯುಕ್ತ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದು, ವರದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬರುವ ನಿರೀಕ್ಷೆ ಇದೆ. ಇದರಲ್ಲಿ ಅಧಿಕಾರಿಗಳ ತಪ್ಪು ಎನ್ನಲಾಗುತ್ತಿದೆ. ಆದರೆ, ಇದರ ಹಿಂದೆ ಸಿಎಂ ಸಿದ್ದರಾಮಯ್ಯ ಇರುವುದನ್ನು ಮುಚ್ಚಿಹಾಕಲಾಗುತ್ತಿದೆ. ಮುಡಾ ಹಗರಣದಲ್ಲಿ 4-5 ಸಾವಿರ ಕೋಟಿ ರೂಪಾಯಿ ಅಕ್ರಮ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹದಿನಾಲ್ಕು ಸೈಟು ವಾಪಸ್ ನೀಡಿರುವುದರಿಂದ ತಪ್ಪಾಗಿದೆ ಎಂಬುದು ಸಾಬೀತಾಗಿದೆ. ಜಾರಿ ನಿರ್ದೇಶನಾಲಯ ಆಸ್ತಿಗಳನ್ನು ವಶಕ್ಕೆ ಪಡೆದಿದ್ದರೂ, ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿಹಾಕುವ ಪ್ರಯತ್ನಗಳೂ ನಡೆಯುತ್ತಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.