ಮೂಡಿಗೆರೆ : ಅಂಗಡಿ ಮೇಲೆ ಬಿದ್ದ ಬೃಹತ್ ಗಾತ್ರದ ಮರ : ತಪ್ಪಿದ ಭಾರೀ ದುರಂತ.

726
firstsuddi

ಮೂಡಿಗೆರೆ : ಗ್ರಾನೈಟ್ ಅಂಗಡಿ ಮೇಲೆ ಬೃಹತ್ ಗಾತ್ರದ ಮರ ಬಿದ್ದಿರುವ ಘಟನೆ ಪಟ್ಟಣದ ಮೇಗಲಪೇಟೆಯಲ್ಲಿ ನಡೆದಿದ್ದು, ಸಂಭವಿಸಲಿದ್ದ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಇಂದು ಬೆಳಿಗ್ಗೆ 8ಗಂಟೆ ಸುಮಾರಿಗೆ ಅಂಗಡಿ ಪಕ್ಕದಲ್ಲಿಯೇ ಇದ್ದ ಮರವೊಂದರ ಭಾರೀ ಗಾತ್ರದ ರೆಂಬೆಯೊಂದು ಹಠಾತ್ ಬಿದ್ದ ಪರಿಣಾಮ ಅಂಗಡಿ ಭಾಗಶಃ ಜಖಂ ಆಗಿದ್ದು, ಅದೃಷ್ವವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮೇಗಲಪೇಟೆಯ ಕೆ.ಎಂ.ರಸ್ತೆ ಎನ್.ಹೆಚ್-173 ರಸ್ತೆಗೆ ಹೊಂದಿಕೊಂಡಂತೆ ಇರುವ ಶ್ರೀದೇವ್ ಗ್ರಾನೈಟ್ ಮತ್ತು ಟೈಲ್ಸ್ ಅಂಗಡಿ ಮೇಲೆ ಮರದ ಕೊಂಬೆ ಬಿದ್ದಿದ್ದು, ಭಾರೀ ಶಬ್ಧದೊಂದಿಗೆ ಕೊಂಬೆಯು ಬಿದ್ದ ಸಂದರ್ಭದಲ್ಲಿ ಅಂಗಡಿಯೊಳಗೆ ಅಂಗಡಿ ಮಾಲೀಕ ಸೇರಿದಂತೆ ಕೆಲಸಗಾರರು ಇದ್ದರು. ಅಂಗಡಿ ಪಕ್ಕದಲ್ಲಿಯೇ ಪಾರ್ಸೆಲ್ ತೆಗೆದುಕೊಂಡು ಬಂದಿದ್ದ ಲಾರಿ ಸಹ ನಿಂತಿತ್ತು. ಶಬ್ಧವನ್ನು ಗಮನಿಸಿದ ಲಾರಿ ಚಾಲಕ ಕೂಡಲೇ ಎಲ್ಲರನ್ನು ಅಂಗಡಿಯಿಂದ ಹೊರ ಬರುವಂತೆ ತಿಳಿಸಿ ನಿಂತಿದ್ದ ಲಾರಿಯನ್ನು ಹೊರಗೆತೆಗೆದಿದ್ದಾನೆ.
ಅಂಗಡಿ ಪಕ್ಕದಲ್ಲಿಯೇ 11 ಕೆವಿ ವಿದ್ಯುತ್ ತಂತಿ ಹಾದು ಹೋಗಿತ್ತು. ಕೊಂಬೆ ವಿದ್ಯುತ್ ತಂತಿಗೆ ತಾಗಿದ ಪರಿಣಾಮ ಬೆಂಕಿಯ ಕಿಡಿ ಕಾಣಿಸಿಕೊಂಡು ಸಮೀಪದಲ್ಲಿಯೇ ಇದ್ದ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿದೆ. ಕೊಂಬೆ ಬಿದ್ದ ಕೂಡಲೇ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಬೆಂಕಿ ಅಪಘಾತವೊಂದು ತಪ್ಪಿದಂತಾಗಿದೆ. ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇಡೀ ದಿನ ಮೇಗಲಪೇಟೆ ಹಾಗೂ ಬಿಳಗುಳ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿತ್ತು.
ಅಪಘಾತ ಸಂಭವಿಸಿದ ಕೂಡಲೇ ಮೆಸ್ಕಾಂ ಸಿಬ್ಬಂದಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೋಲೀಸ್ ಸಿಬ್ಬಂದಿ ಆಗಮಿಸಿ ಸಂಜೆಯ ವೇಳೆಗೆ ಎಲ್ಲವನ್ನೂ ತೆರವುಗೊಳಿಸಿ ಸಹಜ ಕಾರ್ಯಗಳಿಗೆ ಅನುವು ಮಾಡಿಕೊಟ್ಟರು. ಮೂಡಿಗೆರೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಗಡಿ ಮಾಲೀಕರಿಗೆ ಎಷ್ಟು ಮೊತ್ತದ ನಷ್ಟವಾಗಿದೆ ಎಂದು ತಿಳಿದುಬಂದಿಲ್ಲ.