ಕಳಸ : ಮನೆಯಲ್ಲಿ ಇತರೆ ಕೃಷಿ ಚಟುವಟಿಕೆಗಳೊಂದಿಗೆ ಅಣಬೆ ಬೇಸಾಯವನ್ನು ಉಪಕಸುಬು ಮಾಡುವುದರಿಂದ ಹೆಚ್ಚು ಶ್ರಮವಿಲ್ಲದೆ ಉತ್ತಮ ಲಾಭವನ್ನು ಮಾಡಬಹುದು ಎಂದು ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ಹೇಳಿದರು.
ಕಳಸ ಜೆಸಿಐ ಸಂಸ್ಥೆಯು ತೋಟಗಾರಿಕಾ ಇಲಾಖೆಯ ಸಹಯೋಗವನ್ನು ಪಡೆದುಕೊಂಡು ಇಂದು ನಡೆಸಿದ ಉಚಿತ ಅಣಬೆ ತರಭೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು ಮಹಿಳೆಯರು ಹೆಚ್ಚಾಗಿ ಈ ಅಣಬೆ ಕೃಷಿಯನ್ನು ಮಾಡಬಹುದು. ಹೆಚ್ಚಿನ ಖರ್ಚಿಲ್ಲದೆ ಮಾಡುವ ಈ ಕೃಷಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ ಮತ್ತು ಹೆಚ್ಚಿನ ಬೆಲೆಯೂ ಇದೆ. ಪೋಷಕಾಂಶಯುಕ್ತ ಅಣಬೆಯಲ್ಲಿ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಭಾರೀ ಪ್ರಮಾಣದಲ್ಲಿರುವುದರಿಂದ ಆರೋಗ್ಯಕ್ಕೆ ಉಪಯುಕ್ತವಾದ ಆಹಾರ ಪಾದರ್ಥವೂ ಆಗಿದೆ. ಇದನ್ನೆ ಉದ್ಯಮವನ್ನಾಗಿ ಮಾಡಿಕೊಳ್ಳುವವರಿಗೆ ಸರ್ಕಾರ ಅನುದಾನವನ್ನು ಕೂಡ ನೀಡುತ್ತಿದೆ ಎಂದು ಹೇಳಿದರು.
ಜೆಸಿಐ ಅಧ್ಯಕ್ಷ ಅಶೋಕ್ ಜಾವಳಿ ಮಾತನಾಡಿ ಜೆಸಿಐ ವತಿಯಿಂದ ಈ ತರಬೇತಿಯನ್ನು ಮಾಡುತ್ತಿದ್ದು ಆಸಕ್ತರಿಗೆ ಉಚಿತ ಅಣಬೆ ಬೀಜಗಳನ್ನು ಕೂಡ ಇಂದು ವಿತರಿಸಲಾಗುತ್ತಿದೆ. ಇಂತಹ ತರಭೇತಿಗಳನ್ನು ಪಡೆದುಕೊಂಡು ನಾವು ಸ್ವಾವಲಂಬಿಗಳಾಗಿ ಜೀವನ ಮಾಡಲು ಕಲಿಯಬೇಕು. ಉತ್ತಮ ಲಾಭದಾಯಕ ಅಣಬೆ ಬೇಸಾಯವನ್ನು ಮಾಡುದರಿಂದ ಜೀವನದಲ್ಲಿ ನಾವು ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ಅಣಬೆ ಬೇಸಾಯದ ಕುರಿತು ಬಣಕಲ್ ಶಿಶಿರ ತರಬೇತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ಜಯದೇವ, ಕಳಸ ತೋಟಗಾರಿಕಾ ಅಧಿಕಾರಿ ಸಿ.ಚಂದ್ರಪ್ಪ, ಜೆಸಿಐ ಕಾರ್ಯದರ್ಶಿ ಸಂತೋಷ್, ನಿಖಟಪೂರ್ವ ಅಧ್ಯಕ್ಷ ಕೆ.ಸಿ.ಮಹೇಶ್ ಇದ್ದರು.










