ಮೂಡಿಗೆರೆ : ಅಯ್ಯಪ್ಪ ಸ್ವಾಮಿ ದೀಪೋತ್ಸವ ಮತ್ತು ಅನ್ನ ಸಂತರ್ಪಣೆ…

584
firstsuddi

ಮೂಡಿಗೆರೆ: ಇದೇ ಡಿ.20 ಶುಕ್ರವಾರ ಮತ್ತು ಡಿ.21 ಶನಿವಾರದಂದು ಪಟ್ಟಣದ ಹಿರೇ ದೇವಿರಮ್ಮನವರ ಬನದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವರ ಪೂಜೆಯ ಸಲುವಾಗಿ ಅನ್ನಸಂತರ್ಪಣೆ ಹಾಗೂ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಡಿ.20 ಶುಕ್ರವಾರದಂದು ಬೆಳಗ್ಗೆ 7ಗಂಟೆಗೆ ಗಣಪತಿ ಹೋಮವನ್ನು ನಡೆಸಿದ ನಂತರ ನಾಗದೇವರಿಗೆ ಆಶ್ಲೇಷ ಬಲಿ, ಶ್ರೀ ಅಯ್ಯಪ್ಪ ಸ್ವಾಮಿ, ಗಣಪತಿ, ಸುಬ್ರಹ್ಮಣ್ಯ ಸ್ವಾಮಿ ಹಾಗೂ ಹಿರೇ ದೇವಿರಮ್ಮನವರಿಗೆ ಪಂಚಾಮೃತ ಅಭಿಷೇಕ ಮತ್ತು ಮಹಾ ಪೂಜೆ ನಡೆಸಲಾಗುವುದು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಇದೇ ದಿನ ಸಂಜೆ 7 ಗಂಟೆಗೆ ಶಾಲಾ ಮಕ್ಕಳಿಗೆ ಶಾರದಾ ಮಂಟಪದಲ್ಲಿ ಶಾರದಾ ಪೂಜೆ , 7.30 ಕ್ಕೆ ದೇವಿರಮ್ಮನವರಿಗೆ ರಂಗಪೂಜೆ ಏರ್ಪಡಿಸಲಾಗಿದೆ.
ಡಿ.21 ನೇ ಶನಿವಾರದಂದು ಸತ್ಯದೇವತೆ ಹಿರೇ ದೇವಿರಮ್ಮನವರಿಗೆ ಚಂಡಿಕಾ ಹೋಮ ಹಾಗೂ ಪೂರ್ಣಾಹುತಿ, ಮಹಾಪೂಜೆ ಆಯೋಜಿಸಲಾಗಿದೆ. ಸಂಜೆ 5 ಗಂಟೆಗೆ ಹಿರೇ ದೇವಿರಮ್ಮನವರ ಬನದಿಂದ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಯನ್ನು ವಿದ್ಯುತ್ ದೀಪಗಳಿಂದ ಅಲಂಕೃತವಾದ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ, ಪಾಲಕೊಂಬು ಅಲಂಕೃತವಾದ ಆನೆಯೊಂದಿಗೆ ಹಾಗೂ ಕೇರಳದ ಸಿಂಗಾರಿ ಮೇಳ, ಚಂಡೆ ವಾದ್ಯಗಳೊಂದಿಗೆ ಪಟ್ಟಣ ಪ್ರಮುಖ ಬೀದಿಗಳಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಮೆರೆವಣಿಗೆ ನಡೆಸುತ್ತ ವೇಣುಗೋಪಾಲ ದೇವಸ್ಥಾನ ರಸ್ತೆಯ ಮೂಲಕ ಹಳೇ ಮೂಡಿಗೆರೆಯ ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಗುವುದು. ನಂತರ ಶ್ರೀ ನಾರಾಯಣ ಗುರು ಮಲಯಾಳಿ ಸಂಘದ ಸುಮಂಗಲಿಯರಿಂದ ಗಂಗೆ ಕಳಶಗಳನ್ನು ಹಿಡಿದು ಹಾಗೂ ದೀಪ ಹಿಡಿದ ಮಕ್ಕಳೊಂದಿಗೆ ಕೆ.ಎಂ.ರಸ್ತೆ ಮುಖಾಂತರ ಹಿರೇ ದೇವಿರಮ್ಮ ಬನಕ್ಕೆ ಹಿಂತಿರುಗಿ ಬರಲಾಗುವುದು. ನಂತರ ಮಕ್ಕಳು ಹಿಡಿದುಕೊಂಡು ಬಂದ ದೀಪಗಳನ್ನು ದೇವಾಲಯದ ಆವರಣದಲ್ಲಿ ಬೆಳಗಿಸಿ ವಿಶೇಷ ದೀಪೋತ್ಸವ ಆಯೋಜಿಸಲಾಗಿದೆ. ನಂತರ ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಪರಿವಾರ ದೇವರುಗಳಿಗೆ ರಾತ್ರಿ 8 ಗಂಟೆಗೆ ರಂಗ ಪೂಜೆ, ವಿಶೇಷ ಪೂಜೆ ಏರ್ಪಡಿಸಲಾಗಿದ್ದು ಪೂಜೆಯ ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ವಿನಿಯೋಗ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಪ್ರಧಾನ ಗುರುಸ್ವಾಮಿಗಳಾದ ಕೆ.ರಮೇಶ್, ಲೋಕೇಶ್, ಮುನಿಸ್ವಾಮಿ, ಐತಪ್ಪ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದ್ದಾರೆ.