ಮೂಡಿಗೆರೆ :ಕೊರೋನಾ ವಿಚಾರದಲ್ಲಿ ನಿರ್ಲಕ್ಷ್ಯ ಒಳ್ಳೆಯದಲ್ಲ : ಡಾ. ಮಧುಸೂದನ್.

344

ಮೂಡಿಗೆರೆ: ಕೊರೋನಾ ಸೋಂಕಿನ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಎರಡನೇ ಹಂತದ ಕೊರೋನಾ ವೈರಸ್ ಹೆಚ್ಚು ಪ್ರಭಾವಶಾಲಿ ಎನ್ನಲಾಗಿದೆ. ಆದರೆ ಜನತೆಯಲ್ಲಿ ಕೊರೋನಾ ವೈರಸ್ ಬಗ್ಗೆ ಹಿಂದೆ ಇದ್ದಂಥಹ ಎಚ್ಚರಿಕೆಯ ಮನೋಭಾವನೆ ಕಡಿಮೆಯಾಗಿರುವುದು ಎಲ್ಲರಲ್ಲಿಯೂ ಆತಂಕ ಉಂಟು ಮಾಡಿದೆ ಎಂದು ಜಿಲ್ಲಾ ಕೋವಿಡ್ ಅಧಿಕಾರಿ ಅಭಿಪ್ರಾಯಪಟ್ಟರು. ಇಂದು ಗೋಣಿ ಬೀಡಿನ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕೊರೋನಾ ವಾರಿಯರರ್ಸ್‍ಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೊರೋನಾ ಸೋಂಕು ಒಂದು ಜಾಗತಿಕ ಪಿಡುಗು. ಇಂಥಹ ಮಾರಣಾಂತಿಕ ವೈರಸ್ಸಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೆ ಇದ್ದಂತಹ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡ ಕೊರೋನಾ ವಾರಿಯರ್ಸ್ ಕಾರ್ಯ ಎಷ್ಟು ಕೊಂಡಾಡಿದರೂ ಸಾಲದು. ಇಂಥಹ ಮಹತ್ ಕಾರ್ಯವನ್ನು ಗುರುತಿಸಿ ವಿವಿಧೆಡೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅವರ ಕಾರ್ಯಕ್ಕೆ ನೈತಿಕ ಬೆಂಬಲ ಸೂಚಿಸಿದಂತಾಗುತ್ತದೆ. ಕೊರೋನಾ ಸೋಂಕು ಇನ್ನೂ ಪೂರ್ಣವಾಗಿ ನಾಶವಾಗಿಲ್ಲ ಆದುದರಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಮುತುವರ್ಜಿ ಅತ್ಯಗತ್ಯ ಎಂದರು. ನಂತರ ಮಾತನಾಡಿದ ಸಕಲೇಶಪುರ ರಘು ಅವರು, ವೈದ್ಯ ಪಂಡಿತರ ಸಾವಿರಾರು ವರ್ಷಗಳ ಶ್ರಮದಿಂದಾಗಿ ಆಯುರ್ವೇದ ಚಾಲ್ತಿಗೆ ಬಂತು. ಪುರಾತನವಾದ ಆಯುರ್ವೇದ ಚಿಕಿತ್ಸೆ ಪ್ರಭಾವಶಾಲಿಯಾಗಿದ್ದರೂ ಮಂಚೂಣಿಗೆ ಬರಲು ಸಾಧ್ಯವಾಗಿಲ್ಲ. ಆಂಗ್ಲ ಔಷಧ ಕಂಪೆನಿಗಳ ಹುನ್ನಾರ ಇದಕ್ಕೆ ಮೂಲ ಕಾರಣ ಎಂದು ತಿಳಿದಿದ್ದರೂ ಸಹ ಜನತೆ ತ್ವರಿತ ಪ್ರಭಾವದ ಕಾರಣದಿಂದಾಗಿ ಆಂಗ್ಲ ಔಷಧಿಗೆ ಮಾರುಹೋಗುತ್ತಿದ್ದಾರೆ. ಆದರೆ ಕೊರೋನಾ ಬಂದಾಗಿನಿಂದ ಆಯುರ್ವೇದದ ಮಹತ್ವ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿರುವುದು ನಮ್ಮ ದೇಶದ ಹೆಮ್ಮೆ. ಕೊರೋನಾ ಸೋಂಕಿನ ನಡುವೆ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿರಿಸಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ ಕೊರೋನಾ ವಾರಿಯರ್ಸ್ ಕಾರ್ಯ ಮಾತಿನಲ್ಲಿ ಬಣ್ಣಿಸಲು ಸಾಧ್ಯವಾಗದು ಎಂದು ಹೇಳಿದರು.

ಭಜರಂಗದಳ ಜಿಲ್ಲಾ ಸಹ ಸಂಚಾಲಕ ಅವಿನಾಶ್ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ವೇದಿಕೆಯಲ್ಲಿ ವಿ.ಹೆಚ್.ಪಿ ತಾಲ್ಲೂಕು ಅಧ್ಯಕ್ಷ ಸಾಲುಮರ ಮಹೇಶ್, ವಿ.ಹೆಚ್.ಪಿ ತಾಲ್ಲೂಕು ಕಾರ್ಯದರ್ಶಿ ಪ್ರವೀನ್ ಪೂಜಾರಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸುದರ್ಶನ್, ಭಜರಂಗದಳ ತಾಲ್ಲೂಕು ಸಂಚಾಲಕ ವಿನಯ್ ಶೆಟ್ಟಿ, ಗೋಣಿಬೀಡು ಹೋಬಳಿ ಸಹ ಸಂಚಾಲಕ ಹಾರ್‍ಮಕ್ಕಿ ಸಂತೋಷ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯರ್ತರುಗಳು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್‍ಗೆ ಸನ್ಮಾನ ಮಾಡಲಾಯಿತು.