ಮೂಡಿಗೆರೆ : ತಾಯಿ ಬೇರಿನಂತಿರುವ ಜಾನಪದ ಕಲೆ ಉಳಿಸಲು ಸರ್ವರೂ ಕೈಜೋಡಿಸಬೇಕು : ಬಕ್ಕಿ ಮಂಜುನಾಥ್

282
firstsuddi

ಬಣಕಲ್: ಜಾನಪದ ಕಲೆಯು ದೇಶದ ಅತ್ಯಮೂಲ್ಯ ಸಂಪತ್ತಾಗಿದ್ದು, ನಾಗರೀಕತೆ ಸದೃಢವಾಗಿ ಬೆಳೆಯಬೇಕಾದರೆ ಕನ್ನಡ ಸಂಸ್ಕೃತಿಯು ಬೆಳೆಯಬೇಕು. ತಾಯಿ ಬೇರಿನಂತಿರುವ ಜಾನಪದ ಕಲೆ ಉಳಿಸಲು ಸರ್ವರೂ ಕೈಜೋಡಿಸಬೇಕು ಎಂದು ಕನ್ನಡ ಜಾನಪದ ಪರಿಷತ್‍ನ ತಾಲ್ಲೂಕು ಅಧ್ಯಕ್ಷ ಬಕ್ಕಿ ಮಂಜುನಾಥ್ ಹೇಳಿದರು.
ಅವರು ಇಂದು ಕೊಟ್ಟಿಗೆಹಾರ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಸುಗ್ಗಿ ಕಾಲದಲ್ಲಿ ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಾನಪದ ಕಲೆ ಜನರ ಬಾಯಿಂದ ಬಾಯಿಗೆ ಬಂದಂತಹ ಕಲೆ. ಜಾನಪದ ಸಂಸ್ಕೃತಿ ಆಧುನೀಕತೆಯಿಂದ ಅಳಿಯುವ ಮೂಲೆ ಸೇರಿದೆ. ಅತ್ಯಮೂಲ್ಯವಾದ ಕನ್ನಡ ಜಾನಪದ ಸಂಪತ್ತು ಮರೆಯಾಗುತ್ತಿರುವುದು ವಿಷಾಧಕರ ಸಂಗತಿಯಾಗಿದ್ದು, ಪೂರ್ವಿಕರು ಬೆಳೆಸಿ ಬಂದ ಕಲೆಯನ್ನು ಉಳಿಸುವ ಕಾಯಕ ಶಾಲೆಯ ಮಟ್ಟದಿಂದ ಆಗಬೇಕಿದೆ ಎಂದರು.
ಸಂಸ್ಕೃತಿಯ ಚಿಂತಕರಾದ ಹೊರಟ್ಟಿ ರಘು ಅವರು ಮಾತನಾಡಿ, ಐದು ದಶಕಗಳ ಹಿಂದೆ ಇದ್ದ ಕನ್ನಡದ ಜಾನಪದದ ಭಾವಾನಾತ್ಮಕ ಸಂಬಂಧಗಳು ದೂರವಾಗುತ್ತಿದೆ. ಸರ್ಕಾರಿ ಕನ್ನಡ ಶಾಲೆಗಳಿಂದ ಜಾನಪದ ಹಾಡುಗಳು, ಜಾನಪದ ಸಂಸ್ಕೃತಿ ಉಳಿಯಬೇಕಿದೆ. ಆಗಿನ ಕಾಲದಲ್ಲಿ ಒಟ್ಟಿಗೆ ಸೇರಿ ಕೆಲಸದ ಜೊತೆಗೆ ಹಾಡುವ ಶೋಭಾನೆ ಪದಗಳು, ಕೋಲಾಟ, ಗೀಗೀ ಪದಗಳು ಆಧುನೀಕ ಭರಾಟೆಯಲ್ಲಿ ಮರೆಮಾಚಿವೆ. ಆಗಿನ ಕೃಷಿಯ ಪದ್ದತಿಯಲ್ಲಿ ಗ್ರಾಮೀಣ ಭಾಗದಲ್ಲಿದ್ದ ಜನಪದ ಕಲೆಗಳ ರಂಗು ಈಗ ನೆನಪು ಮಾತ್ರವಾಗುತ್ತಿವೆ. ಇದು ಸಲ್ಲದು. ಜಾನಪದ ಕಲೆಗಾರರ ಮಾರ್ಗಧರ್ಶನದಿಂದ ಜಾನಪದ ಉಳಿಸಲು ನಾವು ಪ್ರಯತ್ನಿಸಬೇಕು ಎಂದರು.
ಕನ್ನಡ ಜಾನಪದ ಪರಿಷತ್‍ನ ಹೋಬಳಿ ಅಧ್ಯಕ್ಷ ಸಬ್ಲಿ ದೇವರಾಜ್ ಅವರು ಮಾತನಾಡಿ, ಜಾನಪದ ಕಲಾವಿದರು ಜನಪದ ಕಲೆಯನ್ನು ಹೆಚ್ಚು ಪ್ರಸ್ತುತ ಪಡಿಸುವ ಮೂಲಕ ಜಾನಪದ ಕಲೆಯನ್ನು ಉಳಿಸಲು ಸಾಧ್ಯವಾಗುತ್ತದೆ. ಉತ್ತಮ ಜಾನಪದ ಕಲಾವಿದರಿಗೆ ಸರ್ವರ ಪ್ರೋತ್ಸಾಹದ ಅಗತ್ಯವಿದೆ ಎಂದರು.
ಮುಖ್ಯ ಶಿಕ್ಷಕಿ ಕಮಲ ಅವರು ಮಾತನಾಡಿ, ಜಾನಪದ ಕಲೆಗಳಲ್ಲಿ ಹಲವು ವಿಧದ ಪ್ರಕಾರಗಳಿದ್ದು ಡೊಳ್ಳುಕುಣಿತ, ಜಾನಪದ ಗೀತೆ, ಯಕ್ಷಗಾನ, ಬಯಲಾಟ, ತೊಗಲು ಗೊಂಬೆ ಮತ್ತಿತರ ಕಲೆಗಳು ಕನ್ನಡ ಭಾಷೆಯಿಂದ ನೆಲೆಗೊಂಡಿವೆ. ಈ ಭಾಷೆ ಉಳಿಸಿದರೆ ಜಾನಪದದ ಇಂತಹ ಕಲೆಗಳನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಕಾರ್ಯಧರ್ಶಿ ವಸಂತ್ ಹಾರ್‍ಗೋಡು ಅವರು ಮಾತನಾಡಿದರು. ಜಾನಪದ ಕಲಾವಿದ ಬಕ್ಕಿ ಮಂಜು ಅವರ ತಂಡ ವಿವಿಧ ಜಾನಪದ ಹಾಡುಗಳನ್ನು ಹಾಡಿ ಮಕ್ಕಳ ಮನ ರಂಜಿಸಿದರು. ಕಾರ್ಯಕ್ರಮದಲ್ಲಿ ಕಜಾಪ ಸದಸ್ಯರಾದ ನವೀನ್, ಕೋಮರಾಜ್, ಶಶಿಕುಮಾರ್, ಧನುಷ್, ಶಿಕ್ಷಕರಾದ ಕಿರಣ್, ಯೋಗೀಶ್, ಶಿಕ್ಷಕಿ ಸೌಮ್ಯ, ಅತಿಥಿ ಶಿಕ್ಷಕಿ ಶೋಭಾ ಇದ್ದರು. ನವೀನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಕಿರಣ್ ಸ್ವಾಗತಿಸಿ ವಂದಿಸಿದರು.