ಮೂಡಿಗೆರೆ : ಶ್ರೀ ವೇಣುಗೋಪಾಲ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ವೈಕುಂಠ ಏಕಾದಶಿ ಮತ್ತು ದ್ವಾದಶಿ ಆಚರಣೆ…

239
firstsuddi

ಮೂಡಿಗೆರೆ: ನಗರದ ಶ್ರೀ ವೇಣುಗೋಪಾಲ ದೇವಸ್ಥಾನದಲ್ಲಿ ಸೋಮವಾರದಂದು ಧನುರ್ಮಾಸದ ವೈಕುಂಠ ಏಕಾದಶಿ ಹಾಗೂ ದ್ವಾದಶೀ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಭಾನುವಾರದಿಂದಲೇ ಏಕಾದಶಿ ಹಾಗೂ ದ್ವಾದಶಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ತಾಲ್ಲೂಕು ಆಡಳಿತದ ಸಹಭಾಗಿತ್ವದಲ್ಲಿ ಶ್ರೀ ವೇಣುಗೋಪಾಲ ದೇವಸ್ಥಾನ ಸ್ಥಾಯಿ ಸಮಿತಿ ಹಾಗೂ ಭಕ್ತರುಗಳು ಸಕಲ ಸಿದ್ಧತೆ ನಡೆಸಿದ್ದರು. ಇತ್ತ ಊರಿನ ಜನರು ಏಕಾದಶಿ ಹಬ್ಬದ ಆಚರಣೆಗೆ ತೆರಳುವ ಮುನ್ನ ಮನೆಗಳಲ್ಲಿ ಪೂಜಾ ಕೈಂಕರ್ಯಗಳನ್ನು ಪೂರೈಸಿಕೊಂಡು ನೆಚ್ಚಿನ ದೈವದ ಪೋಜೆಗೆ ವೇಣುಗೋಪಾಲ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಉತ್ತರ ಭಾಗದಲ್ಲಿ ನಿರ್ಮಾಣ ಮಾಡಲಾಗಿದ್ದ ವೈಕುಂಠದ್ವಾರ ಪ್ರವೇಶ ಮಾಡುವ ಮೂಲಕ ಸಂಭ್ರಮ ಪಟ್ಟರು. ಸೋಮವಾರದಂದ ಹಲವು ಮನೆಗಳಲ್ಲಿ ಕೆಲವರು ಉಪವಾಸ ವ್ರತಾಚರಣೆಗಳನ್ನು ಆಚರಣೆ ಮಾಡಿದ್ದರೆ, ಇನ್ನು ಕೆಲವರು ಫಲಾಹಾರ ಸೇವನೆ ಮಾಡುವ ಮೂಲಕ ವ್ರತಾಚರಣೆ ನಡೆಸಿದರು.

ಸೋಮವಾರದಂದು ಬೆಳಗ್ಗೆಯಿಂದಲೇ ವೇಣುಗೋಪಾಲ ದೇವಸ್ಥಾನ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಾಲಯಗಳನ್ನು ವಿಶೇಷ ಹೂವಿನ ಅಲಂಕಾರಮಾಡಲಾಗಿತ್ತು. ಅದರಲ್ಲೂ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಉತ್ತರ ದ್ವಾರದಲ್ಲಿ ವಿಶೇಷವಾಗಿ ನಿರ್ಮಾಣ ಮಾಡಲಾಗಿದ್ದ ವೈಕುಂಠದ್ವಾರ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಮುಂಜಾನೆ 4.30ಕ್ಕೆ ಸುಪ್ರಭಾತ ಸೇವೆ, ಅಷ್ಟಾವಧಾನ ಸೇವೆ ಹಾಗೂ ವೈಕುಂಠದ್ವಾರ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸೂರ್ಯೋದಯಕ್ಕೂ ಮುನ್ನವೇ ವೈಕುಂಠದ್ವಾರವನ್ನು ಉದ್ಘಾಟಿಸಿ ಭಕ್ತರ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಯಿತು. ಮೂಡಿಗೆರೆ ಪಟ್ಟಣ ಸೇರದಂತೆ ವಿವಿಧ ಭಾಗಗಳಿಂದ ಭಕ್ತ ಸಮುದಾಯ ನಸುಕಿನಲ್ಲಿಯೇ ದೇವರಿಗೆ ಪೂಜೆ ಹರಕೆಗಳನ್ನು ಸಲ್ಲಿಸಿ ವೈಕುಂಠದ್ವಾರದ ತೆರೆಯುವಿಕೆಗೆ ಕಾಯುತ್ತಿರುವುದು ಭಕ್ತಿಯ ಪರಾಕಾಷ್ಟೆ ಮುಗಿಲುಮುಟ್ಟುವಂತೆ ಕಾಣುತ್ತಿತ್ತು. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ದೇವಾಲಯಕ್ಕೆ ಆಗಮಿಸಿ ಕ್ಷೇತ್ರದ ಜನರಿಗೆ ಒಳಿತಾಗುವಂತೆ ಪ್ರಾರ್ಥಿಸಿದರು. ರಾತ್ರಿ ಸುಮಂಗಲಿಯರಿಂದ ವಿಷ್ಣು ಸಹಸ್ರ ನಾಮವನ್ನು ಹೇಳಲಾಯಿತು. ವಿಶೇಷ ದೀಪಾಲಂಕಾರದ ಸೇವೆಯ ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ಮಾರನೆಯ ದಿನ ಮಂಗಳವಾರ ದ್ವಾದಶಿಯಂದುಶ್ರೀ ವೇಣು ಗೋಪಾಲಸ್ವಾಮಿಗೆ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಅವತಾರದ ಅಲಂಕಾರ ಮಾಡಲಾಗಿತ್ತು. 10 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ನಡೆಸಲಾಯಿತು. 12 ಗಂಟೆಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು. ಪೂಜೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಂಗಳವಾರದಂದು ಮಧ್ಯಾಹ್ನ ದ್ವಾದಶಿ ಪೂಜೆಗೆ ಸಂಸದೆ ಶೋಭಾಕರಂದ್ಲಾಜೆ ಹಾಗೂ ಎಂ.ಎಲ್.ಸಿ ಪ್ರಾಣೇಶ್ ಅವರುಗಳು ಆಗಮಿಸಿ ಪೂಜೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವೈಕುಂಠ ಏಕಾದಶಿ ಹಾಗೂ ದ್ವಾದಶಿ ಹಬ್ಬದ ಆಚರಣೆಗೆ ಸಾಕ್ಷಿಯಾದರು.