ಮೂಡಿಗೆರೆ : ಒಂದೆಡೆ ಹಣ್ಣಿನ ಅಂಗಡಿ ಮತ್ತೊಂದೆಡೆ ಬಿಸಿ ಇಡ್ಲಿ ಹೋಟೆಲ್ ನಡು ನಡುವೆ ಮಸಾಲ್ ಪೂರಿ ಬೇಕ ಎಂಬ ಆತಿಥ್ಯ ಒಳಗಿನಿಂದ ಮೆಣಸಿನಕಾಯಿ ಬಜ್ಜಿ ಘಮಲು ಎದುರಿನ ಅಂಗಡಿಯಲ್ಲಿ ಫ್ರೆಂಚ್ ಫ್ರೈಸ್ ಬೇಕಾ, ಮಜ್ಜಿಗೆ ಬೇಕಾ ಎಂದು ಗ್ರಾಹಕರುಗಳನ್ನು ಸೆಳೆಯಲು ಸನ್ನೆ ಕೂಗಾಟ ಇದು ಕಂಡು ಬಂದಿದ್ದು ಪಟ್ಟಣದ ನಳಂದಾ ಇಂಗ್ಲೀಷ್ ಪ್ರೈಮರಿ ಮತ್ತು ಹೈಸ್ಕೂಲ್ ಶಾಲೆಯ “ಫನ್-ಫೇರ್-2020” ಕಾರ್ಯಕ್ರಮದಲ್ಲಿ.
ಇದೇನಿದು, ಶಾಲಾ ಆವರಣದಲ್ಲಿ ಎಂತಹ ಸಂತೆ ಎಂದು ಯೋಚಿಸುತ್ತಿದ್ದೀರಾ? ಹೌದು, ಅದು ಫನ್ ಫೇರ್ ಹೆಸರಿನ ಸಂತೆಯೇ. ಮಕ್ಕಳೇ ರೂಪಿಸಿದ ಸಂತೆಯಾಗಿತ್ತು. ಮಿಗಿಲಾಗಿ ಜನರನ್ನು ತನ್ನತ್ತ ಸೆಳೆದಿತ್ತು. ದಿನನಿತ್ಯದ ಒತ್ತಡದ ಜೀವನದಲ್ಲೂ ಪೋಷಕರು ತಮ್ಮ ತಮ್ಮ ಮಕ್ಕಳ ವ್ಯವಹಾರ ಕೌಶಲ್ಯವನ್ನು ನೋಡಲು ಬಂದಿದ್ದು, ಅವರೂ ಕೂಡಾ ಖರೀದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇನ್ನೂ ಶಿಕ್ಷಕ-ಶಿಕ್ಷಕಿಯರು ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ ಬಜ್ಜಿ-ಬೋಂಡಾ ತಿಂದು ಜ್ಯೂಸ್ ಕುಡಿದು ಬಾಯಿ ಚಪ್ಪರಿಸಿದರು. ಯಾವಾ ಅಡುಗೆಯವರಿಗೂ ಕಡಿಮೆ ಇಲ್ಲದಂತೆ ಗ್ಯಾಸ್ ಸ್ಟೌ ಹಚ್ಚಿ ಒಲೆಯ ಮೇಲೆ ಬಾಣಲಿ ಇಟ್ಟು ಅದರೊಳಗೆ ಎಣ್ಣೆ ಹಾಕಿ ಹದವಾಗಿ ಕಾದ ಎಣ್ಣೆಯೊಳಗೆ ಫ್ರೆಂಚ್ ಫ್ರೈಸ್ ಹಾಗೂ ಕಲಸಿದ ಕಡಲೆ ಹಿಟ್ಟಿನೊಂದಿಗೆ ಮೆಣಸಿನಕಾಯಿ ಹಾಕಿ ಕೆಂಪನೆಯ ಬಣ್ಣಕ್ಕೆ ತಿರುಗಿದ ನಂತರ ಅದನ್ನು ಹೊರತೆಗೆದು ತಟ್ಟೆಯಲ್ಲಿ ಹಾಕುತ್ತಿದ್ದ ಹುಡುಗರ ಉತ್ಸಾಹವಂತು ಹೇಳತೀರದಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಮೂಡಿಗೆರೆ ಎಸ್.ಬಿ.ಐ ವ್ಯವಸ್ಥಾಪಕ ಸುಬ್ರಹ್ಮಣ್ಯ ಅವರು ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡಲು ಹಣಕಾಸಿನ ಸಂಪಾದನೆ ಮತ್ತು ನಿರ್ವಹಣೆ ಅತ್ಯಗತ್ಯವಾಗಿದೆ. ಇಂಥಹ ಫನ್ ಫೇರ್ ಕಾರ್ಯಕ್ರಮಗಳು ಮಕ್ಕಳಿಗೆ ಹಣಕಾಸಿನ ಜವಾಬ್ದಾರಿಯುತ ನಿರ್ವಹಣೆ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗುತ್ತದೆ. ಇದರ ಜೊತೆಯಲ್ಲಿ ಕನಿಷ್ಠ ಪ್ರೌಢ ಶಾಲೆಗಳ ಮಟ್ಟದಿಂದ ಹಣಕಾಸಿನ ನಿರ್ವಹಣೆ, ಹೂಡಿಕೆ, ರಕ್ಷಣೆ ಮುಂತಾದವುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಗಳು ಆಗಬೇಕು ಎಂದು ಆಶಿಸಿದರು.
ಎಲ್.ಕೆ.ಜಿ ಮಟ್ಟದಿಂದ ಹಿಡಿದು ಎಸ್.ಎಸ್.ಎಲ್.ಸಿ ಮಟ್ಟದ ವರೆಗಿನ ಮಕ್ಕಳು ವ್ಯಾಪಾರದಲ್ಲಿ ತೊಡಗಿದ್ದರು. 50ಕ್ಕೂ ಹೆಚ್ಚು ಮಳಿಗೆಗಳಲ್ಲಿ ತಮ್ಮ ಅಂಗಡಿಗಳನ್ನು ತೆರೆದು ತಮ್ಮದೇ ಶೈಲಿಯ ವ್ಯಾಪಾರದ ಚಾಕಚಕ್ಯತೆಯನ್ನು ತೋರಿಸಿದರು. ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿದ ದೇಶೀಯ ಶೈಲಿಯ ಉತ್ಪನ್ನಗಳು, ಅಂಗಡಿಗಳಿಂದ ಹೋಲ್ ಸೇಲ್ ದರದಲ್ಲಿ ವಸ್ತುಗಳನ್ನು ತಂದು ಮಾರಾಟ ಮಾಡಿದರು. ಮಲೆನಾಡು ಶೈಲಿಯ ಆಹಾರ ತಿನಿಸುಗಳು, ಆಹಾರ ಪದಾರ್ಥಗಳು, ಅಲಂಕಾರಿಕ ವಸ್ತುಗಳು, ಕರಕುಶಲ ವಸ್ತುಗಳು, ಪಾನೀಯಗಳು, ರುಚಿಕರ ಖಾದ್ಯಗಳನ್ನು ತಂದು ಮಾರಾಟ ಮಾಡಿ ಲಾಭ ಗಳಿಸಿದರು. ಪೋಷಕರು ಮತ್ತು ಸ್ಥಳೀಯರೂ ಕೂಡ ಈ ವ್ಯಾಪಾರದ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಬೆಂಬಲ ಸೂಚಿಸಿದರು. ಫನ್ ಫೇರ್ ಕಾರ್ಯಕ್ರಮದಲ್ಲಿ ಮಕ್ಕಳು ನೇರವಾಗಿ ಪಾಲ್ಗೊಳ್ಳುವ ಮೂಲಕ ವ್ಯವಹಾರ ನಿಯಂತ್ರಣ, ಸಮಯ ಪಾಲನೆ, ಮಾರಾಟ ಮಾಡುವ ಕೌಶಲ್ಯ ಸೇರಿದಂತೆ ವಿವಿಧ ರೀತಿಯ ಮ್ಯಾನೇಜ್ ಮೆಂಟ್ ಪರಿಕಲ್ಪನೆಯನ್ನು ತಿಳಿದುಕೊಂಡರು.
ಪೋಷಕರಿಗೆ ಮತ್ತು ಮಕ್ಕಳಿಗೆ ಗೋಣಿಚೀಲದ ಓಟ, ದಂಪತಿಗಳ ಕಾಲು ಕಟ್ಟು ಓಟ, ಮ್ಯೂಸಿಕಲ್ ಛೇರ್, ನೃತ್ಯ, ಹಾಡುವುದು, ಗುಂಪು ನೃತ್ಯ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕಿ ಹೆಚ್.ಹೆಚ್.ಸಾವಿತ್ರಿ, ಆಡಳಿತ ಮಂಡಳಿಯ ಸದಸ್ಯೆ ಪ್ರೇಮಾ, ಗಾಯತ್ರಿ, ಪೋಷಕ ಲೋಕೇಶ್ ಮರ್ಕಲ್, ನಳಂದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹಷ್ಮಿತಾ ಇರ್ಫಾನ್, ನಳಂದಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ವಿ.ವಿ.ಕಣಗಿನಾಳ್, ಆಡಳಿತ ಅಧಿಕಾರಿಗಳಾದ ಹೆಚ್.ಬಿ.ಸುರೇಶ್, ಗಣೇಶ್ ಟಿ.ಎನ್., ನಳಂದ ಪಿ.ಯು ಕಾಲೇಜಿ ಆಡಳಿತ ಅಧಿಕಾರಿ ಅಣ್ಣೇಶ್ ಸೇರಿದಂತೆ ಶಾಲೆಯ ಸಿಬ್ಬಂದಿಗಳಾದ ವಾಣಿ, ಸ್ವಾತಿ, ಗೋವಿಂದರಾಜ, ಡಾಲಿ, ಸವಿತ, ಅಕ್ಷತಾ, ಪಂಚಮಿ, ಅರ್ಪಿತ, ಸೌಂಧರ್ಯ, ಶಾಜಿಯಾ, ಅನಿತಾ ಸುಧೀರ್, ಜಯಪಾಲ್, ಕುಬ್ರ, ಹಾಗೂ ಪೋಷಕರು ಹಾಜರಿದ್ದರು.









